ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆರೋಪಿ ವಿದೇಶಕ್ಕೆ ಪರಾರಿ

ಬೆಂಗಳೂರು, ನ.4:   ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್ನ ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ವಿದೇಶಕ್ಕೆ  ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಬೆಂಗಳೂರು ಸಿಸಿಬಿ ಪೊಲೀಸರು ಐಪಿಎಲ್ ಮ್ಯಾಕ್ಸ್ ಫಿಕ್ಸಿಂಗ್ ಪ್ರಕರಣ ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿ ಸಯ್ಯಾಂ ವಿದೇಶಕ್ಕೆ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಫಿಕ್ಸಿಂಗ್ ಪ್ರಕರಣ್ಕಕೆ ಸಂಬಂಧಿಸಿ ಹಲವು ರಹಸ್ಯ ಮಾಹಿತಿಗಳು ಸಯ್ಯಾಂ ಬಳಿ ಇದ್ದವು. ಆತ ಪೊಲೀಸರಿಗೆ ಸಿಕ್ಕಿದ್ದರೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿತ್ತು ಎನ್ನಲಾಗಿದೆ.

ಆತ ದುಬೈಗೆ ಹಾರಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿದ್ದು ಆತನನ್ನು ಬಂಧಿಸಲು ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ. ಸಯ್ಯಾಂ ಬಳಿ ಕೆಪಿಎಲ್ ಅಲ್ಲದೆ ಐಪಿಲ್ ಮ್ಯಾಚ್ ಫಿಕ್ಸಿಂಗ್ನ ಹಲವು ರಹಸ್ಯಗಳಿವೆ. ಹೀಗಾಗಿ ಈತನನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿತ್ತು. ವಿಚಾರಣೆಯ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಆತ ವಿದೇಶಕ್ಕೆ ತೆರಳಿದ್ದಾನೆ ಎನ್ನಲಾಗಿದೆ. 

ಬುಕ್ಕಿ ಬಂಧನಕ್ಕಾಗಿ ಸಿಸಿಬಿ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ರಾಷ್ಟ್ರದ ಎಲ್ಲ ವಿಮಾನ ನಿಲ್ದಾಣಗಳಿಗೆ ಈತನ ಬಗ್ಗೆ ಮಾಹಿತಿಯನ್ನು ಸಿಸಿಬಿ ರವಾನಿಸಿದ್ದು, ಆತ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಕೋರಿದೆ. 

ಸಿಸಿಬಿ ಪೊಲೀಸರು ಬುಕ್ಕಿಗಳಾದ ಮನೋಜ್ ಯಾನೆ ಮೌಂಟಿ ದೆಹಲಿಯ ಖಾನ್ ಹಾಗೂ ವೆಂಕಿ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಇವರು ಕೂಡ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಯ್ಯಾಂ ಅಂತಾರಾಷ್ಟ್ರೀಯ ಆಟಗಾರರ ಜೊತೆ ಕೂಡ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.