ಕೋವಿಡ್ -೧೯; ಸೋಂಕು ಮಾದರಿ ಪರೀಕ್ಷೆಯ ಪ್ರಯೋಗಾಲಯವಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ

ಮೈಸೂರು, ಮಾ ೧೩,  ಕೋವಿಡ್-೧೯ ಸೋಂಕು ಪತ್ತೆ ಹಚ್ಚಲು  ನಗರದ  ಕೆ.ಆರ್  ಆಸ್ಪತ್ರೆಯ  ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ( ವಿ ಆರ್ ಡಿ ಎಲ್)  ಸೋಂಕು  ಪರೀಕ್ಷಾ ಪ್ರಯೋಗಾಲಯವನ್ನಾಗಿ  ಕೇಂದ್ರ ಸರ್ಕಾರ  ಗುರುತಿಸಿದೆ  ಎಂದು  ಅಧಿಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.ಸೋಂಕು ಶಂಕಿತರ  ರಕ್ತ, ಗಂಟಲು ದ್ರವ ಮಾದರಿಗಳನ್ನು  ವಿಶ್ಲೇಷಣೆಗಾಗಿ ಈ ಪ್ರಯೋಗಾಲಯಕ್ಕೆ  ಕಳುಹಿಸದರೆ ಮೂರು ಗಂಟೆಗಳಲ್ಲಿ  ಪರೀಕ್ಷೆ ನಡೆಸಿ, ಪುಣೆಯ  ವೈರಾಣು ಸಂಸ್ಥೆಗೆ ರವಾನಿಸಲಿದೆ.ಕೆ.ಆರ್. ಆಸ್ಪತ್ರೆಯ  ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಕೇಂದ್ರ  ಸರ್ಕಾರದ  ಅನುದಾನದಡಿ   ಸ್ಥಾಪಿಸಲಾಗಿರುವ  ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ (  ವಿಆರ್ ಡಿಎಲ್)   ಕೊರೊನಾ  ಸೋಂಕು ಮಾದರಿಗಳ ಪರೀಕ್ಷೆ  ನಡೆಸಲುಅನುಮತಿ ಕಲ್ಪಿಸಲಾಗಿದೆ. ಮೈಸೂರಿನ ಈ  ಪ್ರಯೋಗಾಲಯ   ದೇಶದ ೫೨ ಪ್ಲಸ್   ಪ್ರಯೋಗಾಲಯಗಳಲ್ಲಿ ಒಂದಾಗಿದೆ.ಪರೀಕ್ಷೆಗಳನ್ನು ನಡೆಸಲು ವಿಆರ್ಡಿಎಲ್ ಸಜ್ಜುಗೊಂಡಿದ್ದರೂ,   ದೇಶದಲ್ಲಿ  ಸೋಂಕು  ದೃಢಪಡಿಸುವ  ಏಕೈಕ ಅಧಿಕಾರ  ಪುಣೆಯಲ್ಲಿರುವ   ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ  ಮಾತ್ರ ಹೊಂದಿದೆ. ಕೋವಿಡ್ -೧೯ ರ ಶಂಕಿತ ಮಾದರಿಗಳನ್ನು  ಸಂಗ್ರಹಿಸಿ ಸಾಗಿಸುವ  ಕಾರ್ಯವನ್ನು ಮಾತ್ರ  ವಿಆರ್ ಡಿಎಲ್  ಮಾಡಲಿದೆ.ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಭಾಗವಾಗಿರುವ  ವಿಆರ್  ಡಿಎಲ್   ರಾಷ್ಟ್ರೀಯ  ವೈರಾಣು ಸಂಸ್ಥೆಯ  ಸಲಹೆಯಂತೆ ಕಾರ್ಯನಿರ್ವಹಿಸುತ್ತಿದೆ.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್   ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಇಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶಗಳನ್ನು ಅದೇ ದಿನ ಪುಣೆಯ ರಾಷ್ಟ್ರೀಯ  ವೈರಾಣು  ಸಂಸ್ಥೆಗೆ ರವಾನಿಸಲಿದ. ಪ್ರಕರಣಗಳನ್ನು ದೃಢಪಡಿಸಿ  ಘೋಷಿಸುವ ಏಕೈಕ ಅಧಿಕಾರ  ಪುಣೆಯ ಸಂಸ್ಥೆ ಹೊಂದಿದೆ.ಅಲ್ಲದೆ,  ಕೊರೊನಾ ಸೋಂಕಿನ  ಮಾದರಿಗಳು   ನಕಾರಾತ್ಮಕ   ಎಂದು  ಕಂಡು ಬಂದರೂ  ಸಹ  ರಾಷ್ಟ್ರೀಯ  ವೈರಾಣು ಸಂಸ್ಥೆ  ದೃಢೀಕರಿಸಿ  ಘೋಷಿಸಬೇಕಿದೆ.