ಕರ್ನಾಟಕಕ್ಕೆ ಬರೀ ರೂ. 6,310 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ

For Karnataka only Rs. 6,310 crore has been released only

ಕರ್ನಾಟಕಕ್ಕೆ ಬರೀ ರೂ. 6,310 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ  

ಹಾನಗಲ್ 15: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೆ ಅನ್ಯಾಯ ಮಾಡಿದ್ದು,ಇತ್ತೀಚಿಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಬಿಡುಗಡೆ ಮಾಡಿರುವ ಒಟ್ಟು ರೂ. 1.73 ಲಕ್ಷ ಕೋಟಿ ಪೈಕಿ ಕರ್ನಾಟಕಕ್ಕೆ ಬರೀ ರೂ. 6,310 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು. 

  ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು  ಸ್ಥಳೀಯ ಸಂಸ್ಥೆಗಳಿಗೆ 15 ನೇ ಹಣಕಾಸಿನ ಅನುದಾನ ನೀಡದೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ಸಹಾಯಧನವನ್ನೂ ಬಿಡುಗಡೆಗೊಳಿಸದೇ ಅನ್ಯಾಯ ಮಾಡಲಾಗುತಿದೆ.ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹೊಸದೇನಲ್ಲ,ಅದೀಗ ಮತ್ತೆ ಮುಂದುವರೆದಿದೆ. ಈ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ ಸಹ ನಡೆಸಿದರೂ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಧಾವಿಸುತ್ತಿಲ್ಲ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಧ್ವನಿ ಎತ್ತಿ ಈ ಅನ್ಯಾಯ ಪ್ರಶ್ನಿಸಬೇಕಿದ್ದ ಬಿಜೆಪಿ ನಾಯಕರು ಕೇಂದ್ರದ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. 

  ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 5 ರಷ್ಟು ಕನ್ನಡಿಗರಿದ್ದಾರೆ. ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇ. 8.4 ರಷ್ಟಿದೆ. ಕೇಂದ್ರಕ್ಕೆ ಅತೀ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ. ಅಲ್ಲದೇ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಲೇ ಸಾಗಿದೆ.ಇನ್ನು ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ 15 ನೇ ಹಣಕಾಸು ಯೋಜನೆಯಡಿ ನೀಡಬೇಕಿದ್ದ ಅನುದಾನವನ್ನು ಒಂದು ವರ್ಷ ಗತಿಸಿದರೂ ಕೂಡ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಕೇವಲ ರಾಜ್ಯ ಸರ್ಕಾರ ಮಾತ್ರ ತನ್ನ ಪಾಲಿನ ಸಹಾಯಧನ ಬಿಡುಗಡೆ ಮಾಡಿದ್ದು, ಕೇಂದ್ರದ ಪಾಲಿನ ಸಹಾಯಧನ ಬಿಡುಗಡೆಯಾದೇ ಮನೆಗಳು ಅರ್ಧಕ್ಕೆ ನಿಂತಿವೆ ಎಂದೂ ಶ್ರೀನಿವಾಸ ಮಾನೆ ಕಿಡಿಕಾರಿದ್ದಾರೆ.