ಹ್ಯಾಮಿಲ್ಟನ್, ಫೆ 6 , ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳ ಸೋಲುಂಡರೂ, ಆದರೂ, ಶ್ರೇಯಸ್ ಅಯ್ಯರ್ ಅವರ ಚೊಚ್ಚಲ ಶತಕ ಮತ್ತು 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರಮುಖವಾಗಿತ್ತು. ಭಾರತ ತಂಡದ ನೂತನ ಫಿನಿಷರ್ ಆಗಿ ಹೊರಹೊಮ್ಮುತ್ತಿರುವ ಕೆಎಲ್ ರಾಹುಲ್, ಅಜೇಯ 88 ರನ್‌ಗಳನ್ನು ಸಿಡಿಸುವ ಮೂಲಕ ಶ್ರೇಯಸ್ ಅಯ್ಯರ್ (103) ಜೊತೆಗೂಡಿ ಭಾರತಕ್ಕೆ 347/4 ರನ್‌ಗಳ ಬೃಹತ್ ಮೊತ್ತ ತಂದುಕೊಟ್ಟರು.
ಪ್ರಸಕ್ತ ಕಿವೀಸ್ ಪ್ರವಾಸದಲ್ಲಿ ಅಮೋಘ ಲಯದಲ್ಲಿರುವ ಕೆಎಲ್ ರಾಹುಲ್, ಕೇವಲ 64 ಎಸೆತಗಳಲ್ಲಿ 3 ಬೌಂಡರಿ ಮತ್ತು ಬರೋಬ್ಬರಿ 6 ಸಿಕ್ಸರ್‌ಗಳ ಮೂಲಕ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ವೇಗಿ ಜಿಮ್ಮಿ ನೀಶಮ್ ಅವರ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಸ್ಕೂಪ್ ಶಾಟ್ ಆಡುವ ಮೂಲಕ ಸಿಕ್ಸರ್ ಬಾರಿಸಿದ್ದು ದಿನದ ಅತ್ಯುತ್ತಮ ಹೊಡೆತಗಳಲ್ಲಿ ಒಂದಾಗಿತ್ತು.ರಾಹುಲ್ ಅವರ ಈ ಸ್ಫೋಟಕ ಬ್ಯಾಟಿಂಗ್ ವೀಕ್ಷಿಸಿದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೆಕರ್, ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಅವರನ್ನು ದಕ್ಷಣ ಆಫ್ರಿಕಾದ ಬ್ಯಾಟಿಂಗ್ ದಿಗ್ಗಜ ಹಾಗೂ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ'ವಿಲಿಯರ್ಸ್‌ಗೆ ಹೋಲಿಸಿದ್ದಾರೆ.
ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿರುವ ಮಾಂಜ್ರೆಕರ್, "ಕೆಎಲ್ ರಾಹುಲ್ ಅವರಿಂದ ಮಾತ್ರವೇ 360 ಡಿಗ್ರಿ ಬ್ಯಾಟಿಂಗ್ ಅನ್ನು ಕ್ಲಾಸಿಕ್ ಶೈಲಿಯಲ್ಲಿ ಆಡಲು ಸಾಧ್ಯ," ಎಂದು ಬಣ್ಣಿಸಿದ್ದಾರೆ. ಇದೇ ವೇಳೆ 27 ವರ್ಷದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, 5ನೇ ಕ್ರಮಾಂಕದಲ್ಲೂ ಅಬ್ಬರಿಸಿರುವುದನ್ನು ಕಂಡು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಗುಣಗಾನ ಮಾಡಿದ್ದಾರೆ. "ಭಾರತ ತಂಡದ ಸ್ವಿಸ್ ನೈಫ್," ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಅವರ ಬ್ಯಾಟಿಂಗ್ ವೈಭವವನ್ನು ಹೊಗಳಿದ್ದಾರೆ.
ವಿಕೆಟ್ ಹಿಂಬದಿಯಲ್ಲೂ ರನ್‌ಗಳನ್ನು ಸರಾಗವಾಗಿ ಗಳಿಸುವುದರಿಂದಲೇ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿ'ವಿಲಿಯರ್ಸ್ ಅವರನ್ನು ಮಿಸ್ಟರ್ 350 ಡಿಗ್ರಿ ಎಂದು ಕರೆಯಲಾಗುತ್ತದೆ. ರಾಹುಲ್ ಕೂಡ ಇದೇ ರೀತಿ ಬ್ಯಾಟ್ ಬೀಸುತ್ತಿರುವುದನ್ನು ಕಂಡು ಭಾರತ ತಂಡದ ಮಿಸ್ಟರ್ 360 ಎಂದು ಕರೆಯಲಾಗುತ್ತಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಸೋಲನುಭವಿಸಿದ್ದು, ಇದೀಗ ಆಕ್ಲೆಂಡ್‌ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ಶನಿವಾರ (ಫೆ.8 ರಂದು) ನಡೆಯಲಿರುವ 2ನೇ ಒಡಿಐನಲ್ಲಿ ತಿರುಗೇಟು ನೀಡಿ 1-1ರಲ್ಲಿ ಸರಣಿ ಸಮಬಲ ತಂದುಕೊಳ್ಳುವ ಕಡೆಗೆ ಎದುರು ನೋಡುತ್ತಿದೆ.