ನವದೆಹಲಿ, ಫೆ 22 ; ಮುಂದಿನ ವಾರ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರಕಾರಿ ಶಾಲೆಯೊಂದರಲ್ಲಿ ನಡೆಯುವ 'ಹ್ಯಾಪಿನೆಸ್ ಕ್ಲಾಸ್' ವೀಕ್ಷಣೆ ಮಾಡಲಿದ್ದು, ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರುಗಳನ್ನು ಕೈಬಿಡಲಾಗಿದೆ.ಈ ಹಿಂದೆ ನಿಗದಿಯಾದ ಕಾರ್ಯಕ್ರಮದಂತೆ ದಕ್ಷಿಣ ದೆಹಲಿಯ ಸರಕಾರಿ ಶಾಲೆಗೆ ಮೆಲಾನಿಯಾ ಮುಂದಿನ ಮಂಗಳವಾರ ಆಗಮಿಸುವ ಸಮಯದಲ್ಲಿ ಸಿಎಂ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರನ್ನು ಆಹ್ವಾನಿಸಲಾಗಿತ್ತು .ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಎರಡನೇ ದಿನ ಮೆಲಾನಿಯಾ ಶಾಲೆಗೆ ಭೇಟಿ ನೀಡಿ ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಅಲ್ಲಿನ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ದೆಹಲಿ ಸರ್ಕಾರಿ ಮೂಲಗಳು ಹೇಳಿವೆ. ಈ ವಿವಿಐಪಿ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಿಂದ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರನ್ನು ಕೈಬಿಟ್ಟಿರುವ ಹಿಂದೆ ಕೇಂದ್ರದ ಕೈವಾಡ, ಹುನ್ನಾರವಿದೆ ಎಂದೂ ಆಪ್ ದೂರಿದೆ. ವಾಸ್ತವವಾಗಿ ವಿದ್ಯಾರ್ಥಿಗಳ ಮೇಲಿನ ಒತ್ತಡ ನಿವಾರಿಸುವ ಉದ್ದೇಶದಿಂದ ಶಾಲೆಗಳಲ್ಲಿ ಹ್ಯಾಪಿನೆಸ್ ಪಠ್ಯಕ್ರಮವನ್ನು ಎರಡು ವರ್ಷದ ಹಿಂದೆ ಸಿಸೋಡಿಯಾ ಅವರೇ ಆರಂಭಿಸಿದ್ದರು. ಈ ಹ್ಯಾಪಿನೆಸ್ ಕ್ಲಾಸಿನಲ್ಲಿ ಒಟ್ಟು 40 ನಿಮಿಷಗಳ ಕಾಲ ವಿದ್ಯಾರ್ಥಿಗಳು ಧ್ಯಾನ, ಹೊರಾಂಗಣ ಚಟುವಟಿಕೆಗಳು ಹಾಗೂ ಇತರ ರಿಲ್ಯಾಕ್ಸಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.