ಬೆಂಗಳೂರು, ಮಾ.9,ಸರ್ಕಾರದ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯಲು ದಕ್ಷ ಹಾಗೂ ಪಾಮಾಣಿಕ ಅಧಿಕಾರಿಗಳಾಗಲು ತಯಾರು ಮಾಡುತ್ತಿರುವ ಜೆಎಸ್ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕೇಂದ್ರಿಯ ನಾಗರಿಕ ಸೇವೆಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಜೆ.ಎಸ್.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇಟಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕೇಂದ್ರೀಯ ನಾಗರೀಕ ಸೇವೆಗಳು ಹಾಗೂ ಕರ್ನಾಟಕ ಗೆಜೆಟೆಡ್ ಪ್ರೋಬೇಷನರಿ ಗ್ರೂಪ್ ಎ ಮತ್ತು ಬಿ ಶ್ರೇಣಿಗಳಿಗೆ ಆಯ್ಕೆಯಾದವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರಿಗೆ ಸುಭದ್ರ ಆಡಳಿತವನ್ನೊದಗಿಸುವ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಡಳಿತ ರಂಗದ ವಿವಿಧ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ.
ದೇಶದ ವಿವಿಧ ರಾಜ್ಯದಲ್ಲಿ ಕೇಂದ್ರಿಯ ನಾಗರಿಕ ಸೇವೆಗಳಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್ ಮತ್ತು ಕರ್ನಾಟಕ ನಾಗರಿಕ ಸೇವೆ ಮುಂತಾದ ಉನ್ನತ ಹುದ್ದೆಗಳಿಗೆ ಆಯ್ಕೆ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂಸ್ಥೆಯ ಸಾಧನೆಯನ್ನು ಬಿಂಬಿಸುತ್ತದೆ ಎಂದರು.ಇತ್ತೀಚಿನ ಯುಪಿಎಸ್ಸಿ ಮತ್ತು ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಗಳಾಗಿ ಆಯ್ಕೆಯಾದವರನ್ನು ಅಭಿನಂದಿಸುತ್ತೇನೆ. ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ಯಶಸ್ಸು ನಿಮ್ಮದಾಗಿಸಿಕೊಂಡಿದ್ದೀರಿ. ನಿಷ್ಠೆಯಿಂದ ಸರ್ಕಾರಿ ಕೆಲಸವನ್ನು ನಿರ್ವಹಿಸುವ ಮೂಲಕ ಸರ್ಕಾರದ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕು. ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಫಲಾನುಭವಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
ಜೆಎಸ್ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ಶಿಕ್ಷಣ ಕೈಂಕರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ ಎಂದರು.ಕನ್ನಡ ನಾಡಿನ ಧಾರ್ಮಿಕ ಚರಿತ್ರೆಯಲ್ಲಿ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠ ಒಂದು ಹೆಗ್ಗುರುತು. ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರು ಸ್ವತಂತ್ರ ಪೂರ್ವದಲ್ಲಿಯೇ ನಾಡಿನ ಅಭ್ಯುದಯಕ್ಕೆ ಅನ್ನ, ಅರಿವು, ಆರೋಗ್ಯವೆಂಬ ತ್ರಿತತ್ತ್ವಗಳು ಮುಖ್ಯವೆಂದು ಸಂಕಲ್ಪಿಸಿದರು ಎಂದರು. ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಮಠವು ಸಮಾಜದ ಎಲ್ಲಾ ವರ್ಗಗಳ ಅನುಯಾಯಿಗಳನ್ನು ಹೊಂದಿದೆ ಹಾಗೂ ಕಾಯಕವೇ ಕೈಲಾಸ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ.
ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸುತ್ತೂರು ಮಠವು ನೀಡಿರುವ ಕೊಡುಗೆ ಮಹತ್ವಪೂರ್ಣವಾದುದು ಎಂದು ಬಣ್ಣಿಸಿದರು. ನಾಡಿನ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಶ್ರೀಮಠ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.ಅಂತಹ ಮಹೋನ್ನತ ಕೊಡುಗೆಗಳಲ್ಲಿ ಜೆಎಸ್ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ (ಜಸ್ಟೀಸ್) ಕೂಡ ಒಂದು. ಕರ್ನಾಟಕ ನಾಗರಿಕ ಸೇವೆಯ ಪರೀಕ್ಷಾರ್ಥಿಗಳಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಜೆಎಸ್ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಸ್ಥಾಪನೆಗೊಂಡಿತು. ಜಸ್ಟೀಸ್ ಸಂಸ್ಥೆಯ ಸ್ಥಾಪನೆಯಲ್ಲಿ ಶ್ರೀಮಠದ ಹಳೆಯ ವಿದ್ಯಾರ್ಥಿಗಳು, ಖ್ಯಾತ ಅರ್ಥಶಾಸ್ತ್ರಜ್ಞರು, ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದ ಡಾ. ಡಿ.ಎಂ. ನಂಜುಂಡಪ್ಪನವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.