ಲೋಕದರ್ಶನ ವರದಿ
ಬೈಲಹೊಂಗಲ 20: ಭಾರತೀಯ ಸೈನ್ಯಕ್ಕೆ ನಡೆದ ಪರೀಕ್ಷೆಯಲ್ಲಿ 8.5 ಲಕ್ಷ ಮಹಿಳೆಯರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬೈಲಹೊಂಗಲ ನಾಡಿನ ಶ್ರೇಯಸ್ಸು ಹೆಚ್ಚಿಸಿದ ಜ್ಯೋತಿ ಹಂಚಿನಮನಿ ಅವರ ಪರಿಶ್ರಮ ಶ್ಲಾಘಣೀಯ ಎಂದು ಕಿತ್ತೂರ ರಾಣಿ ಚನ್ನಮ್ಮ ಸೌಹಾರ್ದ ಸಹಕಾರಿ ಅಧ್ಯಕ್ಷ ಡಾ.ವಿ.ಎಸ್. ಸಾಧುನವರ ಹೇಳಿದರು. ಅವರು ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಜ್ಯೋತಿ ಹಂಚಿನಮನಿ ಅವಳನ್ನು ಸನ್ಮಾನಿಸಿ ಮಾತನಾಡಿ, ನಿರಂತರ ಪರಿಶ್ರಮ, ಭಕ್ತಿ ಹಾಗೂ ಛಲ ಹೊಂದಿದ ಗ್ರಾಮೀಣ ಪ್ರತಿಭೆ ನಮ್ಮ ವೀರ ಕೇಸರಿ ಅಮಟೂರ ಬಾಳಪ್ಪನ ಹಳ್ಳಿಯ ಹೆಣ್ಣು ಮಗು ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಸೈನ್ಯದಲ್ಲಿಯೂ ಅಪ್ರತಿಮ ಸಾಧನೆ ಮಾಡಿ ಕಿತ್ತೂರ ರಾಣಿ ಚನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮನಂತೆ ನಾಡಿನ ಕೀತರ್ಿ ಬೆಳಗಿಸಲಿ ಎಂದರು.
ಜ್ಯೋತಿ ಹಂಚಿನಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿ ನನ್ನನ್ನು ಹುರಿದುಂಬಿಸಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಲ್ಲದೆ ನನ್ನ ಈ ಸಾಧನೆಗೆ ತಂದೆ, ತಾಯಿ ತಮ್ಮಂತಹ ಸಹೃದಯಿ ಗುರು ಹಿರಿಯರ ಆಶೀರ್ವಾದ ಫಲವೆ ಕಾರಣ, ನಿಮ್ಮ ಹರಕೆ, ಹಾರೈಕೆಗೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ನನ್ನದು. ಆದ್ದರಿಂದ ಎಲ್ಲ ಹಿರಿಯರಲ್ಲಿ ಹಾಗೂ ಮಹಿಳೆಯರಲ್ಲಿ ನನ್ನದೊಂದು ಕಳಕಳಿಯ ಮನವಿ ಎನೆಂದರೆ ಹೆಣ್ಣು ಎಂದು ಕೀಳರಿಮೆ ತೊರೆದು ಅವರನ್ನು ಮನೆಯ ಕೆಲಸಕ್ಕೆ ಮಾತ್ರ ಸೀಮಿತಗೊಳಿಸದೆ ಅವರಿಗೂ ಎಲ್ಲದರಲ್ಲಿಯೂ ಅವಕಾಶ ಕಲ್ಪಿಸಿಕೊಡುವ ಕೆಲಸವನ್ನು ಮಾಡಬೇಕು ಎಂದರು. ಈ ಸಂದರ್ಭದಲ್ಲಿ ರೂ. 10,000/- ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಮಲ್ಲನಾಯ್ಕ ಪಾಟೀಲ, ಪರಪ್ಪ ತಟವಟಿ, ಮಹಾದೇವಿ ಹಂಚಿನಮನಿ, ರಾಜು ರಾಮನ್ನವರ, ರಾಜು ಹೊಸಮನಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಾಲಿಮಠ, ನಾರಾಯಣ ನಲವಡೆ, ಬಸವರಾಜ ಅರಳಿಕಟ್ಟಿ, ಕುಮಾರ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ, ಅರುಣ ಕಟ್ಟಿ, ಶ್ರೀದೇವಿ ಹುಂಬಿ ಸಿಬ್ಬಂದಿ ಉಪಸ್ಥಿತರಿದ್ದರು.
ಭಾರತಿ ಸಂಬರಗಿ ಸ್ವಾಗತಿಸಿದರು. ಈರಪ್ಪ ನಾನಣ್ಣವರ ನಿರೂಪಿಸಿದರು. ಮಾರುತಿ ಕಲಾದಗಿ ವಂದಿಸಿದರು.