ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ ಜಾರಿಯಿಂದ ನ್ಯಾಯ ಗೆದ್ದಿದೆ : ಪ್ರಧಾನಿ

ನವದೆಹಲಿ, ಮಾ 20, ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಇಂದು ಮುಂಜಾನೆ ಗಲ್ಲು ಶಿಕ್ಷೆ ಜಾರಿಯಾಗಿದ್ದರ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ‘ನ್ಯಾಯ ಮೇಲುಗೈ ಸಾಧಿಸಿದ’ ಎಂದಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರಧಾನಿ, ಸ್ತ್ರೀ ಸಬಲೀಕರಣದೊಡನೆ ಸುಸ್ಥಿರ ದೇಶ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. “ನ್ಯಾಯ ಗೆದ್ದಿದೆ. ಮಹಿಳೆಯರ ಘನತೆ, ಸುರಕ್ಷತೆಯ ಭರವಸೆ ಅತ್ಯಗತ್ಯ.  ನಮ್ಮ ನಾರಿಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದೆ” ಎಂದಿರುವ ಪ್ರಧಾನಿ, “ ಸ್ತ್ರೀ ಸಬಲೀಕರಣ, ಸಮಾನತೆ ಮತ್ತು ಅವಕಾಶಗಳ ಮೂಲಕ ದೇಶ ಕಟ್ಟುವತ್ತ ಗಮನ ನೀಡಬೇಕು” ಎಂದು ಹೇಳಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ಮುಂಜಾನೆ 5.30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.