ರೋಹ್ಟಕ್, ಅ 23: ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶ ಬಿಜೆಪಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ, ರಾಜ್ಯದಲ್ಲಿ ಬಲವಾದ ಸರ್ಕಾರ ರಚಿಸಲು ಇತರ ಎಲ್ಲ ಪಕ್ಷಗಳು ಮತ್ತು ಪಕ್ಷೇತರರು ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದು ಹೇಳಿದರು.
ಸುದ್ದಿಗಾರರೊಡನೆ ಈ ಕುರಿತು ಮಾತನಾಡುತ್ತಾ, ಜನಾದೇಶವು ಆಡಳಿತ ಪಕ್ಷದ ವಿರುದ್ಧವಾಗಿದ್ದು, ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
ಕಾಂಗ್ರೆಸ್, ಜೆಜೆಪಿ, ಐಎನ್ಎಲ್ಡಿ, ಮತ್ತು ಸ್ವತಂತ್ರರು ಒಟ್ಟಾಗಿ ಸೇರುವ ಸಮಯ ಬಂದಿದ್ದು, ಬಲವಾದ ಸರ್ಕಾರವನ್ನು ರಚಿಸಬೇಕಿದೆ. ಕೈ ಜೋಡಿಸುವ ಪ್ರತಿಯೊಬ್ಬರಿಗೂ ಗೌರವ ನೀಡಲಾಗುವುದು ಮತ್ತು ಗೌರವಾನ್ವಿತ ಸ್ಥಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿನ ವರದಿಗಳ ಪ್ರಕಾರ, ಆಡಳಿತಾರೂಢ ಬಿಜೆಪಿ 39 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ವಿರೋಧ ಪಕ್ಷದ ಕಾಂಗ್ರೆಸ್ ಅಭ್ಯರ್ಥಿಗಳು 31 ವಿಭಾಗಗಳಲ್ಲಿ ಮುಂದಿದ್ದಾರೆ.