ಡಾ. ವಿ. ಕೃ. ಗೋಕಾಕರ ಶಿಷ್ಯರಾಗಿ ಕಾಲೇಜಿನಲ್ಲಿದ್ದಾಗಲೇ ಕವನ ಸಂಕಲನ ಹೊರತಂದ ಜಿನದತ್ತ ದೇಸಾಯಿಯವರು ಜಿಲ್ಲಾ ನ್ಯಾಯಾಧೀಶರಾಗಿದ್ದ 30 ವರ್ಷಗಳ ಕಾಲ ಲೇಖನಿ ಸನ್ಯಾಸ ತೆಗೆದುಕೊಂಡು ನಿವೃತ್ತರಾದ ನಂತರ "ಮತ್ತೆ ಬಂದಿದ್ದೇನೆ" ಎಂದು ಕವನ ಸಂಕಲನದ ಮೂಲಕವೇ ಕಾವ್ಯಲೋಕಕ್ಕೆ ಸಾರಿ ಹೇಳಿದವರು ಆ ಮೇಲೆ ಹನಿಗವನ ಕ್ಷೇತ್ರಕ್ಕೆ ನುಗ್ಗಿ ಸಾವಿರಾರು ಹನಿಗವನಗಳನ್ನು ಬರೆದು ಆರೆಂಟು ಹನಿಗವನ ಸಂಕಲನಗಳ ಮೂಲಕ ರಾಜ್ಯ ವ್ಯಾಪಿ ಪ್ರಸಿದ್ಧಿ ಪಡೆದವರು.
ಹನಿಗವನ ಕ್ಷೇತ್ರದಲ್ಲಿ ಹೆಸರು ಪಡೆದ ಎಚ್.ಡುಂಡಿರಾಜ, ಜರಗನಹಳ್ಳಿ ಶಿವಶಂಕರ, ಬಿ. ಆರ್. ಲಕ್ಷ್ಮಣರಾವ್ ಮೊದಲಾದವರೊಡನೆ ಜಿನದತ್ತರ ಹೆಸರೂ ಇಂದು ಬಹಳ ಮುಖ್ಯವಾಗಿದೆ. ಆದರೆ ಇವರೆಲ್ಲರ ಹನಿಗವನಗಳ ಸ್ವರೂಪ ಬೇರೆಬೇರೆಯೇ. ಡುಂಡಿರಾಜರು ಹಾಸ್ಯ- ಶಬ್ದಗಳ ಕಸರತ್ತಿಗೆ ಮಹತ್ವ ಕೊಟ್ಟರೆ, ಜರಗನಹಳ್ಳಿಯವರು ಗಂಭೀರ ಚಿಂತನಾಪರ ಹನಿಗವನಗಳನ್ನು ಬರೆದು ಮೆಚ್ಚುಗೆ ಪಡೆದವರು. ಜಿನದತ್ತರ ಹನಿಗವನಗಳಲ್ಲಿ ಹೆಚ್ಚಾಗಿ ಸಾಮಾಜಿಕ ಕಾಳಜಿ ಮತ್ತು ರಾಜಕೀಯ ವ್ಯವಸ್ಥೆಯ ವಿಡಂಬನೆಯನ್ನು ಕಾಣಬಹುದಾಗಿದೆ.
ಒಳಗಿನ ಮಳೆ, ಬೊಗಸೆಯಲ್ಲಿ ಬೆಳಕು, ಹೆಜ್ಜೆಸಾಲು, ಜಗದಗಲ ಮುಗಿಲಗಕ, ಗರುಡನ ರೆಕ್ಕೆಯ ಚುಟುಕು ಹಕ್ಕಿ, ಮೊದಲಾದ ಸಂಕಲನಗಳೊಡನೆ ಜಿನದತ್ತರ 80ನೇ ವರ್ಷದ ಸಂದರ್ಭದಲ್ಲಿ "ಸಹಸ್ರಚಂದ್ರ" ಎಂಬ ಹೆಸರಿನಲ್ಲೇ ಸಾವಿರ ಹನಿಗವನಗಳ ಸಂಗ್ರಹ ಹೊರಬಂದಿದೆ. ಉಡುಪಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಆರ್.ಸಿ.ಯು. ದಿಂದ ಗೌರವ ಡಾಕ್ಟರೇಟ್ ಪೆಎದಿರುವ ಅವರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರ ಕೆಲವು ಹನಿಗವನಗಳ ಸ್ಯಾಂಪಲ್ ಇಲ್ಲಿದೆ.
*
ಕವಿಗಳೇ,
ಕದಿಯುವದಾದರೆ
ನನ್ನ ಚುಟುಕುಗಳನ್ನೇ ಆಯ್ದುಕೊಳ್ಳಿ
ಅವು ಪ್ರಚಾರದಲ್ಲಿಲ್ಲ
ಸಿಕ್ಕಿಬೀಳುವ ಭಯವಿಲ್ಲ.
*
ಮಠದ ಸ್ವಾಮಿಗಳೆಲ್ಲ ಬ್ರಹ್ಮಚಾರಿಗಳಲ್ಲ
ಬ್ರಹ್ಮಚಾರಿಗಳೆಲ್ಲ ಮಠದ ಸ್ವಾಮಿಗಳಲ್ಲ
ಎಲ್ಲಿಯ ಮಠ,
ಎಲ್ಲಿಯ ಬ್ರಹ್ಮಚರ್ಯ
ಎತ್ತಣಿಂದೆತ್ತಣ ಸಂಬಂಧವಯ್ಯಾ...
*
ನಾಳೆ
ನಾನು ಇರುವದಿಲ್ಲ
ನೀನೂ ಇರುವುದಿಲ್ಲ
ಖಂಡಿತ ಇರುತ್ತದೆ
ನಾಳೆ
*
ನಮ್ಮ ಪ್ರಜಾಪ್ರಭುತ್ವದ
ಬೇರುಗಳಿರುವದೇ
ಕೊಳೆಗೇರಿಗಳಲ್ಲಿ
ಅದಕ್ಕೇ ನಮ್ಮ ಸರ್ಕಾರಗಳಿಗೆಲ್ಲ
ಭಟ್ಟೀಸೆರೆಯ ವಾಸನೆ!
*
ಈ ಊರಿನಲ್ಲಿರುವದು
ಎರಡೇ ಹೊಟೆಲು
ಒಂದು "ಕಾಲರಾ ಕೆಫೆ"
ಇನ್ನೊಂದು "ವಾಂತಿವಿಲಾಸ"
ಇವುಗಳೆದುರಿಗಿರುವದೇ
"ಸರಕಾರಿ ದವಾಖಾನೆ"
ಅದರಾಚೆಗಿರುವದೇ
"ಸ್ಮಶಾನ"
ಆಯ್ಕೆ ನಿಮ್ಮದು!
*
ಇರುಳೆಲ್ಲ ಸುತ್ತುವೀ
ಬೆಳಕನುಟ್ಟ ಹುಡುಗಿಯರು
ಬೆಳಗಾಗುತ್ತಲೇ ಅದೆಲ್ಲಿ
ಮಾಯವಾಗುವರು
ಈ ನಕ್ಷತ್ರಕನ್ಯೆಯರು?
*
ಪ್ರಜಾಪ್ರಭುತ್ವದಲ್ಲಿ
ಕೈಗಳನ್ನೆಣಿಸುತ್ತಾರೆ
ತಲೆಗಳನ್ನಲ್ಲ
ತಲೆ ಬೇಕೇ ಬೇಕೆನ್ನುವ
ನಿಯಮವಿಲ್ಲ
*
ಕವಿಗಳು ಹುಚ್ಚರು
ಎಲ್ಲ ಕವಿಗಳೂ ಹುಚ್ಚರಲ್ಲ
ಎಲ್ಲ ಹುಚ್ಚರೂ ಕವಿಗಳಲ್ಲ
ಕವಿಗಳಲ್ಲಿ ಕೆಲವರು
ಹುಚ್ಚರಿದ್ದಾರೆ
ಆ ಮಾತು ಬೇರೆ
*
ಸಾಹಿತ್ಯ ಸಮ್ಮೇಳನದಲ್ಲಿ
ಏನೆಲ್ಲ ಇತ್ತು
ರಸ್ತೆಗೆ ಟಾರು
ಮಂತ್ರಿಗೆ ಕಾರು
ಭುವನೇಶ್ವರಿಗೆ ತೇರು
ಎಲ್ಲಾ ಇತ್ತು
ಸರಸ್ವತಿಯನ್ನಾವ ಮೂಲೆಗೆ
ತಳ್ಳಿದ್ದರೋ
ಅವಳೇ ಕಾಣಲಿಲ್ಲ
ಇವು ಸರಳವಾಗೆನಿಸಿದರೂ ಇವುಗಳಲ್ಲಡಗಿದ ಒಳಧ್ವನಿ, ಸಾಮಾಜಿಕ ಕಾಳಜಿ, ತೀಕ್ಷ್ಣ ವ್ಯಂಗ್ಯ ವಿಡಂಬನೆ ಚುಟುಕು ಕವಿಗಳಿಗೆ ಅಧ್ಯಯನಕ್ಕೆ ಯೋಗ್ಯವಾಗಿವೆ
- ಎಲ್. ಎಸ್. ಶಾಸ್ತ್ರಿ
ಹಿರಿಯ ಸಾಹಿತಿಗಳು, ಪತ್ರಕರ್ತರು
ಬೆಳಗಾವಿ
-0-0-0-