ಇದರಲ್ಲಿ 40 ಕಿರುಬರೆಹಗಳಿವೆ. ಜಯಲಕ್ಷ್ಮಿಯವರು ಕಾಲೇಜು ಉಪನ್ಯಾಸಕಿಯಾಗಿರುವವರು. ಅದಕ್ಕೆ ತಕ್ಕಂತೆ ಈ ಸಂಕಲನದ ಹೆಚ್ಚಿನ ಲೇಖನಗಳು ಶಿಕ್ಷಣ ಕ್ಷೇತ್ರ ಮತ್ತು ಕಲಿಯುವ ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ್ದಾಗಿವೆ. ಅವರ ವೃತ್ತಿಮುಖೇನ ಬಂದ ಅನುಭವಗಳು, ಮಕ್ಕಳ ಮನಸ್ಥಿತಿ, ಹಿರಿಯರ ಹೊಣೆಗಾರಿಕೆ, ಸಾರ್ವಜನಿಕವಾದ ನಡೆನುಡಿಗಳು ಇರಬೇಕಾದ ಸ್ವರೂಪ ಮೊದಲಾದ ವಿಷಯಗಳನ್ನೆತ್ತಿಕೊಂಡು ಸರಳವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಕೆಲಸವನ್ನು ಅವರಿಲ್ಲಿ ಮಾಡಿದ್ದಾರೆ. ಇದು ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಇರುವಂತಹ ಎಲ್ಲ ಬರೆಹಗಾರರೂ ಮಾಡಬೆಕಾದ ಕೆಲಸವೇ.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ, ಶಿಕ್ಷೆ ರಹಿತ ಶಿಕ್ಷಣ - ಎತ್ತ ಸಾಗೀತು ಯುವಜನ?, ಮಕ್ಕಳು ಅಂತಸ್ತಿನ ದ್ಯೋತಕವಲ್ಲ- ಭವಿಷ್ಯದ ಸೊತ್ತು, ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಶಿಕ್ಷೆ ಮೊದಲಾದ ಲೇಖನಗಳನ್ನು ಇದಕ್ಕೆ ಉದಾಹರಿಸಬಹುದು. ಇತರ ಹಲವು ಸಮಾಜಮುಖಿ ಚಿಂತನೆಗಳೂ ಇವೆ. ನನಗೆ ಅನಿಸುವ ಹಾಗೆ ಜಯಲಕ್ಷ್ಮಿಯವರಲ್ಲಿ ತಮ್ಮ ಸುತ್ತ ಮುತ್ತಲಿನ ಎಲ್ಲ ಬಗೆಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಸ್ಪಂದಿಸುವ ಪತ್ರಕರ್ತರ ದೃಷ್ಟಿಯೂ ಇದೆ. ಆದ್ರಿಂದಲೇ ಕೆಲವೊಂದು ಲೇಖನಗಳಿಗೆ ವರದಿಯ ಸ್ವರೂಪವು ಇದೆ. ಕಾಡು ಪ್ರಾಣಿಗಳ ಪಯಣ ನಾಡಿನತ್ತ, ಮಾದಕ ವ್ಯಸನ - ಇರಲಿ ಎಚ್ಚರ, ಕರೆವ ಕೊರಳುಗಳು, ಸಂತೃಪ್ತ ಮನಸು ಸಂತಸ ಬದುಕು, ನಾನು ಮೂಕ ಪ್ರಾಣಿ, ತಾಳಿ ಬಾಳು ಜೀವವೇ, ನಮ್ಮ ಗಣತಿ ಯಾವಾಗ ಮೊದಲಾದ ಲೇಖನಗಳನ್ನದಕ್ಕೆ ಉದಾಹರಿಸಬಹುದು.
ಸಂಕ್ಷಿಪ್ತೀಕರಣ ಇವರ ಲೇಖನಗಳ ವೈಶಿಷ್ಟ್ಯ. ಯಾವ ಅತಿವಿಸ್ತರಣೆ, ಅತಿಶಯೋಕ್ತಿಯಿಲ್ಲದೇ ಬರೆಯುವ ಶೈಲಿಯನ್ನು ಜಯಲಕ್ಷ್ಮಿಯವರು ಕರಗತ ಮಾಡಿಕೊಂಡಿದ್ದಾರೆ. ಹೇಳಬೇಕೆನಿಸಿದ್ದನ್ನು ನೇರವಾಗಿ ಹೇಳುವ ಮತ್ತು ವಾಸ್ತವ ಸಂಗತಿಗಳನ್ನು ತಿಳಿಸುವ ಮೂಲಕ ಅವರು ತಮ್ಮ "ಚಪ್ಪಾಳೆಗೂ ಬೆಲೆ ಇದೆ" ಎಂಬ ಬರೆಹದಲ್ಲಿ ನಾವು ಸಾಮಾನ್ಯವಾಗಿ ಸಮಾಜ ಜೀವನದಲ್ಲಿ ಕಾಣುವ ಮನುಷ್ಯರ ಪ್ರವೃತ್ತಿಯ ವಿಚಾರವನ್ನು ಎತ್ತಿಕೊಂಡಿದ್ದಾರೆ. ಇದೊಂದು ಬಹಳ ದೊಡ್ಡ ಸಂಗತಿ ಅನಿಸದಿದ್ದರೂ ಇತರರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸುವಲ್ಲಿ ನಮ್ಮ ಚಪ್ಪಾಳೆಗೂ ಬೆಲೆ ಇದೆ/ ಇರಬೇಕು ಎಂಬ ಅಂಶವನ್ನು ಗಮನಕ್ಕೆ ತರುತ್ತಾರೆ. ಇದು ಅಲಕ್ಷಿಸುವಂತಹ ಸಂಗತಿಯೇನೂ ಅಲ್ಲ.
ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಬಹಳ ದೊಡ್ಡ ಜವಾಬ್ದಾರಿ ಇರುವ ಶಿಕ್ಷಕರು ತಮ್ಮ ಲಕ್ಷ್ಯದಲ್ಲಿಡಬೇಕಾದ ಕೆಲ ಪ್ರಮುಖ ವಿಚಾರಗಳಿವೆ. ಮಕ್ಕಳು, ಅವರ ಪಾಲಕರು ಮತ್ತು ಸಮಾಜ ಈ ಮೂರು ಘಟಕಗಳ ನಡುವೆ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸಬಯಸುವ ಶಿಕ್ಷಕರು ಆ ಮೂರೂ ಘಟಕಗಳ ಹಿತಾಸಕ್ತಿಯನ್ನು ಕಾದುಕೊಂಡು ಹೋಗುವ ಕಡೆಗೂ ಗಮನ ಹರಿಸಬೇಕಾಗುತ್ತದೆ. ಆ ಕಾಳಜಿ, ಕಳಕಳಿ ಇಲ್ಲದವರು ಶಿಕ್ಷಕ ವೃತ್ತಿಗೆ ಅರ್ಹರಾಗಿರುವದಿಲ್ಲ. ಜಯಲಕ್ಷ್ಮಿಯವರ ಈ ಬರೆಹಗಳಲ್ಲಿ ಕಂಡುಬರುವ ಆ ಕಾಳಜಿ ಇತರರಿಗೂ ಅನುಕರಣೀಯವೆಂಬುದು ನನ್ನ ಭಾವನೆ. ಅವರಿಗೆ ಭಾಷೆಯ ಮೇಲೆ ಹಿಡಿತವಿದೆ. ಅವರು ಈ ಕೆರೆ ಬಾವಿಗಳ ಕಿರಿದಾದ ಜಗತ್ತಿನಿಂದ ವಿಸ್ತಾರವಾದ ಹೊಳೆಹಳ್ಳಗಳಲ್ಲಿ ಈಜಲು ಇದು ಸಕಾಲ. ಆ ಸಾಮರ್ಥ್ಯ ಅವರಿಗಿದೆ. ಮಕ್ಕಳ ಕತೆ ಕಾದಂಬರಿಗಳನ್ನು ಸಹ ಅವರು ಬರೆಯಬಹುದು. ಅವರಿಂದ ಇನ್ನೂ ಹೆಚ್ಚಿನದನ್ನು ನೀರೀಕ್ಷಿಸೋಣ.
ಹೇರಂಬ ಪ್ರಕಾಶನ
ಮಡಿಕೇರಿ
ಪುಟಗಳು :116
ಬೆಲೆ: 130 ರೂ.
- ಎಲ್. ಎಸ್. ಶಾಸ್ತ್ರಿ
ಹಿರಿಯ ಸಾಹಿತಿಗಳು, ಪತ್ರಕರ್ತರು
ಬೆಳಗಾವಿ
- * * * -