ಒಳಿತಿನ ಪರವಾಗಿ ಮಿಡಿಯುವ ಜಯದೇವಿ ಗಾಯಕವಾಡ ಗಜಲ್

‘ಅಣ್ಣಾ ಮುಗಿದು ಹೋಗಲಿ ಜಾತಿ ವೈರದ ಕಾಲ, ಅಕ್ಕಾ ಅಳಿದು ಹೋಗಲಿ ಕೋಮು ದ್ವೇಷದ ಕಾಲ’ ಎಂದು ಎಲ್ಲ ದ್ವೇಷ, ಅಸಮತೆ ಅಳಿದು ಸರ್ವರೊಂದೆಂದು ಸಾರುವ ದಿನಗಳು ಬರಲೆಂದು ಆಶಿಸುವ ಈ ಗಜಲ್‌ನ ಸಾಲುಗಳು ಡಾ. ಜಯದೇವಿ ಗಾಯಕವಾಡ ಅವರದು. ಬೀದರನ ಚಿಟಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಗಾಯಕವಾಡ ಅವರು ಕಾದಂಬರಿಗಾರ್ತಿ, ವಿಮರ್ಶಕಿ, ಗಜಲ್ ಬರಹಗಾರ್ತಿ, ಮಹಿಳಾ ಚಿಂತಕಿ, ಸಂಶೋಧಕಿಯಾಗಿ ನಾಡಿನೆಲ್ಲೆಡೆ ಗುರುತಿಸಿಕೊಂಡಿದ್ದಾರೆ. ‘ಯಾಜ್ಞಸೇನಿಯ ಆತ್ಮಕಥನ’ ಇವರ ಮೊದಲ ಕಾದಂಬರಿ, ಇದು ಇಂಗ್ಲೀಷ, ಹಿಂದಿ, ಮರಾಠಿ,  ತೆಲುಗು ಭಾಷೆಗೆ ಅನುವಾದಗೊಂಡಿದ್ದಲ್ಲದೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹೇಗೆ ಹೇಳಲಿ ನಾನು, ಮರುಭೂಮಿ ಮಾಡದಿರಿ, ಕಪ್ಪು ಹುಡುಗಿಯ ಹಾಡು ಇವರ ಪ್ರಕಟಿತ ಕವನ ಸಂಕಲನಗಳು. ಮೂವತ್ತೊಂದು ಗಜಲ್‌ಗಳು, ಪ್ರಜ್ಞೆ ಶೀಲ ಕರುಣೆಯ ಗಜಲ್‌ಗಳು, ವೈಶಾಖ ಪೂರ್ಣಿಮೆಯ ಗಜಲ್‌ಗಳು ಪ್ರಕಟಿತ ಗಜಲ್ ಸಂಕಲನಗಳು. ಡಾ. ಅಬ್ದುಲ್ ಕಲಾಂ, ರಾಣಿ ಚೆನ್ನಮ್ಮ, ರಮಾಬಾಯಿ ಅಂಬೇಡ್ಕರ್ ಜೀವನ ಚರಿತ್ರೆ, ಸಾಹಿತ್ಯ ಸಂಕ್ರಮಣ, ಜಾಗತೀಕರಣ ಮಹಿಳೆ ಸವಾಲುಗಳು, ಬಿಸಿಲ ಬಯಲ ಬೆಡಗು, ಸಂಸ್ಕೃತಿ ಸೊಗಡು, ಸಾಹಿತ್ಯ ಸೃಷ್ಟಿ ವಿಮರ್ಶಾ ಸಂಕಲನಗಳಾಗಿವೆ. ವಚನಕಾರರ ಕುರಿತು ಬರೆದ ಅನೇಕ ಗ್ರಂಥಗಳು, ದಲಿತ ನಾಟಕಗಳು, ಹಾಯ್ಕು, ರೂಬಾಯಿ, ಆಧುನಿಕ ವಚನಗಳು ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡಿದ ಬಹುಮುಖ ಪ್ರತಿಭೆ ಡಾ. ಜಯದೇವಿ ಗಾಯಕವಾಡ.  

ಅಂತರರಾಷ್ಟ್ರೀಯ  ಮಹಿಳಾ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಅವ್ವ ಪ್ರಶಸ್ತಿ, ಅಮ್ಮ ಗೌರವ ಪ್ರಶಸ್ತಿ, ಶರಣ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಸಾಪದ ಶ್ರೀ ವಿಜಯ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಇವರ ಸಾಹಿತ್ಯ ಸೇವೆಗೆ ಸಂದ ನಾಡಿನ ಗೌರವ ಸಮ್ಮಾನಗಳಾಗಿವೆ. ಅನೇಕ ಸಂಘಟನೆ, ಹೋರಾಟಗಳಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ. 

‘ಇದು ಕೈಯಲ್ಲಿ ನುರಿದ ಉಪ್ಪು ಹಿಡಿದುಕೊಂಡು ತಿರುಗುವವರ ಕಾಲ. ಸುಮ್ಮನೆ ನಿನ್ನ ಧಗಧಗ ಗಾಯವನ್ನು ಎಲ್ಲರಿಗೂ ತೋರಿಸಿಕೊಂಡು ಓಡಾಡಬೇಡ’ ಎಂದು ಕವಿಗಳು ನುಡಿದಿದ್ದಾರೆ. ನೊಂದವರ ನೋವಿಗೆ ಮತ್ತಷ್ಟು ನೋವು ನೀಡುವವರೇ ತುಂಬಿರುವ ಈ ದಿನಮಾನದಲ್ಲಿ ಗಾಯಕ್ಕೆ ಮುಲಾಮು ಸವರುವ, ಸಾಂತ್ವನ ಹೇಳುವ, ಎದೆಗಪ್ಪಿ ಧೈರ್ಯ ತುಂಬುವವರು ತೀರಾ ಕಡಿಮೆ. ಶೋಷಿತರು, ತಳ ಸಮುದಾಯದವರು, ಸೌಲಭ್ಯಗಳಿಂದ ವಂಚಿತರು ಇಂದು ಅನುಭವಿಸುವ ಯಾತನೆಗಳಿಗೆ ಕೊನೆಯೇ ಇಲ್ಲ. ಅವರೆಲ್ಲರ ಎದೆಯ ದನಿಯಾಗಿ ನ್ಯಾಯ ಕೊಡಿಸುವ, ನೆಮ್ಮದಿಯ ಬದುಕು ನಡೆಸುವಂತೆ ಭರವಸೆ ತುಂಬುವ ಕೆಲಸ ಆಗಬೇಕಿದೆ. ಅಂತಹ ಅಪರೂಪದ ಅಭಿವ್ಯಕ್ತಿ ಜಯದೇವಿಯವರ ಈ ಗಜಲ್‌. ಸಖಿಯನ್ನು ಜೊತೆಗೆ ಕರೆಯುತ್ತಲೇ ಆಗಬೇಕಾದ ಎಲ್ಲ ತುರ್ತಿನ ಕಾರ್ಯಗಳನ್ನು ಮಾಡುವ ಅಂತಃಕರಣ, ಕಾಳಜಿಯನ್ನು ಕಾಣಿಸುತ್ತದೆ. ಈ ಜಗತ್ತಿನಲ್ಲಿ ನೋವುಗಳಿಗೆ ಕಿವಿಯಾಗುವ ಜೀವಗಳು ಸಿಕ್ಕಂದೇ ಬದುಕು ಸಂತಸ ಸಂಭ್ರಮದಿಂದ ಕಂಗೊಳಿಸುತ್ತೆ. ಈ ಗಜಲ್‌ನಲ್ಲಿ ಅಂತಹ ಮಹತ್ತರ ಆಶಯ ತೋರುತ್ತದೆ. 

ನೊಂದವರ ಗಾಯಗಳಿಗೆ ಮುಲಾಮು ಸವರುವ, ಎದೆಯಲ್ಲಿ ಜ್ವಾಲಾಮುಖಿಯನ್ನಡಗಿಸಿಕೊಂಡು ನಗುತ್ತಿರುವವರಿಗೆ ಸಾಂತ್ವನ ತುಂಬಿ, ಸಂತನಾಗುವ ಮಾನವೀಯತೆಯ ಹೃದಯ ಇಲ್ಲಿ ಅರಳಿ ನಿಂತಿದೆ. ಅಸಮಾನತೆಯ ದಳ್ಳುರಿಯಲ್ಲಿ ದಿನವೂ ಬಲಿಯಾಗುತ್ತಿವೆ ಸಾಕಷ್ಟು ಜೀವಗಳು. ಸಮಾನತೆಯ ಮಲ್ಲಿಗೆಯ ಬಳ್ಳಿ ಬಾಡಿ ಹೋಗುತ್ತಿದೆ ಒಂಚೂರು ನೀರು ಉಣಿಸಿ ಅದನ್ನು ಘಮಘಮಿಸುವ ಹಾಗೆ ಮಾಡೋಣ. ಅರಳಿ ಕಂಗೊಳಿಸಬೇಕಾದ ಎಳೆಯ ಹೂಗಳು, ಕನಸು ಚಿಗುರುವ ಮುನ್ನವೇ ಕಾಮುಕರ ಕೈಗೆ ಸಿಕ್ಕು ಹೊಸಕಿ ಹಾಕಲ್ಪಡುತ್ತಿವೆ. ಇದೇ ಭಯದಿಂದ ಮುದುರಿದ ಬದುಕುಗಳನ್ನು ಮತ್ತೆ ಚಿಗುರಿಸಬೇಕಿದೆ. ದ್ವೇಷ-ಅಸೂಯೆಗಳ ದಾಳಕ್ಕೆ ಸಿಡಿಯುತ್ತಿರುವ ಗುಂಡುಗಳು ಅಮಾಯಕರ ಬಲಿ ಪಡೆಯುತ್ತಿವೆ. ಇದೆಲ್ಲ ನಿಲ್ಲಬೇಕೆಂದರೆ ಶಾಂತಿಯ ಪಾರಿವಾಳ ಬಾನೆತ್ತರ ಪಟಪಟಿಸುವಂತೆ ಮಾಡಬೇಕಿದೆ. ಪ್ರೀತಿ ಹೊರಸೂಸಬೇಕಾದ ಕಣ್ಣಲ್ಲಿ ಬೆಂಕಿಯ ಜ್ವಾಲೆಗಳು ಚಿಮ್ಮುತ್ತಿವೆ. ಆ ಕಣ್ಣಿನ ಬೆಂಕಿ ನಂದಿಸಲು ಮಳೆ ಹನಿಗಳ ಸಿಂಪಡಿಸಬೇಕಿದೆ ಎನ್ನುತ್ತದೆ ಡಾ. ಜಯದೇವಿ ಅವರ ಗಜಲ್‌. 

ಜಗದ ಎಲ್ಲ ನೋವುಗಳನ್ನು ಗಂಟಲಿಗೆ ಬಸಿದುಕೊಂಡು ಹಾಡಾಗಿಸುವುದೇ ಇಂದಿನ ಎಲ್ಲ ಕವಿಗಳ ಜರೂರತ್ತು. ಒಳಿತಿನ ಪರವಾಗಿ ಮಿಡಿಯುವ ಗಜಲ್ ನೊಂದವರ ಕಣ್ಣೀರು ಒರೆಸುತ್ತದೆ, ಮನುಷ್ಯಪ್ರೀತಿಗೆ ಹಾತೊರೆಯುತ್ತದೆ. ಇಂತಹ ಒಳ್ಳೆಯ ಗಜಲ್ ನೀಡಿದ ಡಾ. ಜಯದೇವಿ ಗಾಯಕವಾಡ ಅವರಿಗೆ ನಮಸ್ಕರಿಸುವೆ.    

- * * * -