ನವದೆಹಲಿ, ಅ 26: ಮುಂದಿನ ವರ್ಷ ಜನವರಿ 10 ರಿಂದ ಆರಂಭವಾಗುವ ಸಂತೋಷ್ ಟ್ರೋಫಿ 74ನೇ ಆವೃತ್ತಿಯ ಟೂರ್ನಿಗೆ ಡ್ರಾ ಮಾಡಲಾಗಿದ್ದು, ದೆಹಲಿ ತಂಡ (ದಕ್ಷಿಣ ವಲಯ ಎ) ಅರ್ಹತಾ ಸುತ್ತಿನಲ್ಲಿ ಜಯ ಸಾಧಿಸಿದ ತಂಡದ ವಿರುದ್ಧ ಗುಂಪು 'ಎ' ನಲ್ಲಿ ತನ್ನ ಮೊದಲನೇ ಪಂದ್ಯವಾಡಲಿದೆ. ನವದೆಹಲಿಯಲ್ಲಿರುವ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸಂತೋಷ್ ಟ್ರೋಫಿ ಅಂತಿಮ ಸುತ್ತಿನ ಡ್ರಾ ನಡೆಯಿತು. ಡ್ರಾ ನಡೆಸುವ ವೇಳೆ ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್, ಹಿರಿಯ ಉಪಾಧ್ಯಕ್ಷ ಸುಬ್ರತಾ ದತ್ತ, ಲೀಗ್ ಸಮಿತಿಯ ಸದಸ್ಯರಾದ ಅನಿಲ್ ಕುಮಾರ್, ಸೌಟೆರ್ ವಾಜ್, ಚಿರಾಗ್ ಟನ್ನಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಸಂತೋಷ್ ಟ್ರೋಫಿ ಅಂತಿಮ ಹಣಾಹಣಿಗೆ ಈಗಾಗಲೇ ಎಂಟು ತಂಡಗಳು ಅರ್ಹತೆ ಪಡೆದಿವೆ. ಆದರೆ, ನವೆಂಬರ್ 5 ರಂದು ನಡೆಯುವ ದಕ್ಷಿಣ ವಲಯದ ಅರ್ಹತಾ ಸುತ್ತಿನ ಮೂಲಕ ಇನ್ನೆರಡು ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ. ಹಾಲಿ ಚಾಂಪಿಯನ್ ಸರ್ವಿಸ್ ತಂಡ, ದೆಹಲಿ, ಜಾರ್ಖಂಡ್, ಮೇಘಾಲಯ, ಹಾಗೂ ದಕ್ಷಿಣ ವಲಯದ ಅರ್ಹತಾ ಸುತ್ತಿನಲ್ಲಿ ಜಯ ಸಾಧಿಸಿದ ತಂಡದ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. 32 ಬಾರಿ ಚಾಂಪಿಯನ್ ಆಗಿರುವ ಪಶ್ಚಿಮ ಬಂಗಾಳ ತಂಡ ಬಿ ಗುಂಪಿನಲ್ಲಿ ಪಂಜಾಬ್ ಗೋವಾ, ಆತಿಥೇಯ ವಿಜೋರಾಂ ಹಾಗೂ ದಕ್ಷಿಣ ವಲಯದ ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡದೊಂದಿಗೆ ಸ್ಥಾನ ಪಡೆದುಕೊಂಡಿದೆ. ಮೊದಲನೇ ಪಂದ್ಯ ಜನವರಿ 10 ರಂದು ನಡೆಯುವ ಮೂಲಕ ಸಂತೋಷ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಜನವರಿ 23 ರಂದು ಫೈನಲ್ ಪಂದ್ಯದೊಂದಿಗೆ ಟೂರ್ನಿ ಅಂತ್ಯವಾಗಲಿದೆ.