ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ ಜನತಾದಳ ಸಂಯುಕ್ತ ಖಂಡನೆ
ಧಾರವಾಡ 10 : ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವವರ ಮೇಲೆ, ಸರಕಾರ ಲಾಟಿಚಾರ್ಜ್ ಮಾಡಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಇದು ಖಂಡನೀಯ.
ಸರ್ಕಾರವು ಸಂವಿಧಾನಬದ್ಧವಾಗಿ ಎಲ್ಲ ಸಮಾಜದ ನ್ಯಾಯಯುತ ಹಕ್ಕುಗಳನ್ನು ಈಡೇರಿಸಿ ಸಾಮಾಜಿಕ ನ್ಯಾಯ ನೀಡುವುದು ಅದರ ಕರ್ತವ್ಯ. ಆದರೆ ಹಲವಾರು ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮಾಜವು 2ಎ ಮೀಸಲಾತಿಯನ್ನು ಮತ್ತು ಕೇಂದ್ರದಲ್ಲಿ ಎಲ್ಲ ಲಿಂಗಾಯತ ಒಳಪಂಗಡಗಳನ್ನು ಓಬಿಸಿ ಪಟ್ಟಿಗೆ ಸೇರಿಸುವಂತೆ ಸಾಕಷ್ಟು ಸಲ ಅಧಿಕಾರದಲ್ಲಿದ್ದ ಆಯಾ ಸರ್ಕಾರಗಳಿಗೆತಾಳ್ಮೆಯಿಂದ ವಿನಂತಿಸುತ್ತ ಬಂದಿದ್ದು, ಅದೇ ರೀತಿ ಪ್ರಸ್ತುತ ಸರ್ಕಾರಕ್ಕೂ ವಿನಂತಿಸುತ್ತಾ ಬರುತ್ತಿದೆ. ಆದರೆ ಪ್ರಸ್ತುತ ಸರಕಾರ ಈ ಕುರಿತು ಸ್ಪಷ್ಟ ನಿಲುವು ತಾಳದೆ ಕಾಲಹರಣ ಮಾಡುತ್ತ ಬರುತ್ತಿರುವುದನ್ನು ಖಂಡಿಸಿ ಅನಿವಾರ್ಯವಾಗಿ ಎಂದಿನಂತೆ ಶ್ರೀಗಳ ನೇತೃತ್ವದಲ್ಲಿ ಸಮಾಜ ಬಾಂಧವರು ಬೆಳಗಾವಿ ಅಧಿವೇಶನದಲ್ಲಿ ತಮ್ಮ ನ್ಯಾಯಯುತ ಹಕ್ಕು ಹಾಗೂ ಬೇಡಿಕೆಗಾಗಿ ಆಗ್ರಹಿಸಿ ಶಾಂತಿಯುತ ಹೋರಾಟ ನಡೆಸುತ್ತಿರುವವರ ಮೇಲೆ ಲಾಠಿಚಾರ್ಜ ಮಾಡಿಸಿ, ದಬ್ಬಾಳಿಕೆ ಮಾಡಿ ಶ್ರೀಗಳನ್ನು ಹಾಗೂ ಮುಖಂಡರನ್ನು, ನ್ಯಾಯವಾದಿಗಳನ್ನು ವಶಕ್ಕೆ ಪಡೆದು ಹೋರಾಟ ಹತ್ತಿಕ್ಕುವಂತೆ ಮಾಡಿದ ಕ್ರಮ ಅತ್ಯಂತ ಖಂಡನೀಯ ಮತ್ತು ಅಮಾನವೀಯ ಕೃತ್ಯವಾಗಿದೆ. ಇದು ಪ್ರಜಾಪ್ರಭುತ್ವದ ಮತ್ತು ಜನತಂತ್ರದ ಕಗ್ಗೋಲೆಯಂತೆ ಗೋಚರಿಸುತ್ತದೆ. ಇದನ್ನು ಜನತಾದಳ ಸಂಯುಕ್ತ ಬಹುಬಲವಾಗಿ, ತೀವ್ರವಾಗಿ ಖಂಡಿಸುತ್ತದೆ.ಸಾಮಾಜಿಕ ನ್ಯಾಯದಡಿ ಎಲ್ಲ ಸಮಾಜದವರ ಸಂವಿಧಾನಬದ್ಧ ಹಕ್ಕು ಕಾಪಾಡುವುದು, ಎಲ್ಲ ಸಮಾಜದವರನ್ನು ತಾರತಮ್ಯವಿಲ್ಲದೆ ಸಮವಾಗಿ ಕಾಣುವುದು ಸರಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಬಹು ದಿನದ ನ್ಯಾಯುತ ಬೇಡಿಕೆಯನ್ನು ಈಡೇರಿಸಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ಜನತಾದಳ ಸಂಯುಕ್ತ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ, ವಕ್ತಾರ ಶೇಖರ ಹೈಬತ್ತಿ, ಪ್ರಧಾನ ಕಾರ್ಯದರ್ಶಿ ಪಿರೋಜಖಾನ ಹವಾಲ್ದಾರ, ಪದಾಧಿಕಾರಿಗಳಾದ ಓಂಸಂಗಮೇಶ, ರತ್ನಾ ಗಂಗಣ್ಣವರ, ಶಕುಂತಲಾ ಶೆಟ್ಟಿ, ನಿರ್ಮಲಾ ಹಿರೇಮಠ, ಕಲ್ಲಪ್ಪ ಗುಂಡಗಾಂವಿ ಮುಂತಾದವರು ಪತ್ರಿಕಾ ಪ್ರಕಟಣೆಯ ಮೂಲಕ ಬಹುಬಲವಾಗಿ ಆಗ್ರಹಿಸಿದ್ದಾರೆ.