ಜನರ ಬಳಿಗೆ ಆಡಳಿತ ತರುವ ಜನಸ್ಪಂದನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

Janaspandan is an ambitious plan of the government to bring governance to the people.

ಜನರ ಬಳಿಗೆ ಆಡಳಿತ  ತರುವ ಜನಸ್ಪಂದನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.  


ಹಾವೇರಿ  1 : ಜನರ ಬಳಿಗೆ ಆಡಳಿತ  ತರುವ ಜನಸ್ಪಂದನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನರ ನಡುವೆ ಆಡಳಿತವನ್ನು ತೆಗೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತಿದೆ. ತಾಲೂಕಿನಲ್ಲಿ ಈವರೆಗೆ ನಡೆದ ಜನಸ್ಪಂದ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ 600ಅಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಹೇಳಿದರು. 

ಹಾನಗಲ್ ತಾಲೂಕು ಆಡೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಆಡಳಿತ ಹಾಗೂ  ತಾಲೂಕು ಪಂಚಾಯತ್  ಸಹಯೋಗದಲ್ಲಿ ಆಯೋಜಿಸಲಾದ  ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಸಮಸ್ಯೆಗಳ ಪರಿಹಾರ ನೀಡಲು ಜನರ ಹತ್ತಿರ ಆಡಳಿತ ವ್ಯವಸ್ಥೆ ತೆಗೆದುಕೊಂಡು ಹೋಗುವ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. 

ಕಂದಾಯ ಹಾಗೂ ಕೃಷಿ ಇಲಾಖೆ ಜನರ ಜೀವನಾಡಿ.  ಹಾಗಾಗಿ ಈ ಇಲಾಖೆಗಳಿಗೆ ಚುರುಕುಮುಟ್ಟಿಸುವ ಹಾಗೂ ಬದಲಾವಣೆ ಕೆಲಸಮಾಡಲಾಗುತ್ತಿದೆ. ಬಿ ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. 30 ರಿಂದ 40 ವರ್ಷಗಳಿಂದ ವಾಸಿಸುವವರಿಗೆ ಪಟ್ಟಾ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.  

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ,  ಜನರು ಮತ್ತು ರೈತರು ಇರುವಲ್ಲಿ ಅಭಿವೃದ್ಧಿಯಾಗಬೇಕು, ಸಾರ್ವಜನಿಕರು ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಚೇರಿ ಅಲೆದಾಟ ತಪ್ಪಿಸಿ, ಗ್ರಾಮದಲ್ಲಿಯೇ ಅವರ ಸಮಸ್ಯೆ ಬಗೆಹರಿಸಲು ಜನಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ.  ಹಾನಗಲ್ ತಾಲೂಕಿನಲ್ಲಿ ಈಗಾಗಲೇ ಆರರಿಂದ ಏಳು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.  ಇಲ್ಲಿ ಸ್ವೀಕರಿಸುವ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು. 

ತಾಲೂಕು ಆಡಳಿತ ಉತ್ತಮವಾಗಿ ಕೆಲಸಮಾಡುತ್ತಿದೆ, ಜೊತೆಗೆ ಶಾಸಕರು ಎಲ್ಲರ ಸಮಸ್ಯೆಗಳನ್ನು ಆಲಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅಧಿಕಾರಿಗಳ ಹಂತದಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಯಿಂದ ಬಗೆಹರಿಯದ ಸಮಸ್ಯೆಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಂಡಿದ್ದಾರೆ ಎಂದು ಹೇಳಿದರು. 

ದೂರುಗಳ ಮಹಾಪೂರ:  ಮನೆಹಾನಿ ಪರಿಹಾರ, ಹೊಲಕ್ಕೆ ದಾರಿ, ಭೂಸ್ವಾಧೀನ ಪರಿಹಾರ,  ಪಹಣಿಯಲ್ಲಿನ ಸರ್ಕಾರ ಕಡಿಮೆಮಾಡಲು ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಹಣದ ಬೇಡಿಕೆ, ‘ಬಿ’ ಖಾತಾ ಪಹಣಿ, ಬಸ್ ಸೌಲಭ್ಯ   ಸೇರಿದಂತೆ ಸಾರ್ವಜನಿಕರು ವಿವಿಧ ಸಮಸ್ಯೆಗಳ ಅಹವಾಲು ಸಲ್ಲಿಸಿದರು. 

ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಅತ್ಯಂತ ಸಮಾಧಾನದಿಂದ ಆಲಿಸಿದರು. 

ಇಲ್ಲಿ ಸಲ್ಲಿಕೆಯಾಗುವ ಎಲ್ಲ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥ್ಯಗೊಳಿಸಬೇಕು  ಹಾಗೂ ಸರ್ಕಾರದ ಮಟ್ಟದ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ನಕ್ಷೆಯಲ್ಲಿದ್ದ ದಾರಿಗಳ ತೆರವಿಗೆ ಕ್ರಮ:   ನಕ್ಷೆಯಲ್ಲಿ ದಾರಿಗಳಿದ್ದರೆ ತೆರವುಗೊಳಿಸಲಾಗುವುದು, ಇಲ್ಲವಾದಲ್ಲಿ  ಬಿತ್ತನೆ ಹಾಗೂ ಬೆಳೆಕಟಾವು ಸಮಯದಲ್ಲಿ ಅನುಕೂಲ ಮಾಡಿಸಲಾಗುವುದು. ಜಮೀನಿನ ದಾರಿ ಸಮಸ್ಯೆಗಳು ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾಗುತ್ತದೆ. ಈ ಕುರಿತು ಬಹಳ ದೂರುಗಳು ಬಂದ ಹಿನ್ನಲೆಯಲ್ಲಿ ಮಾನ್ಯ  ಆಯುಕ್ತರು  ಮಾಹಿತಿ ಕೇಳಿದ್ದಾರೆ.  ಒಂದು ವೇಳೆ ತಹಶೀಲ್ದಾರಗಳಿಗೆ ಅಧಿಕಾರ ನೀಡಿದರೆ  ತಹಶೀಲ್ದಾರ ಹಂತದಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.  

ಹೊಸ ರಸ್ತೆಗಳಿಗೆ ಮಾತ್ರ ಪರಿಹಾರ: ಕಳೆದ  30 ರಿಂದ 40 ವರ್ಷದ ಹಳೆಯ ದಾರಿಗಳಿಗೆ ಈಗ ಪರಿಹಾರ ನೀಡಲು ಅವಕಾಶ ಇರುವುದಿಲ್ಲ. ಹೊಸದಾಗಿ ರಸ್ತೆ ಮಾಡುತ್ತಿದ್ದರೆ ಪರಿಹಾರ ಕೊಡಿಸಲು ಕ್ರಮವಹಿಸಲಾಗುವುದು.  40 ರಿಂದ 50 ವರ್ಷಗಳ ಹಿಂದೆ ನಮ್ಮ ಪೂರ್ವಜರು ಶಾಲೆ, ಆಸ್ಪತ್ರೆ ಹಾಗೂ ರಸ್ತೆಗಳಿಗೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಇಲಾಖೆಗಳು ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಹಾಗಾಗಿ ಹಳೆ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕಷ್ಟಸಾಧ್ಯ  ಎಂದು ಹೇಳಿದರು. 

ನಗರ ಪ್ರದೇಶದಲ್ಲಿ ಅನಧೀಕೃತ ಕಟ್ಟಡಗಳ ಮಾಲೀಕರು ಖರೀದಿ ಪತ್ರ ಇದ್ದರೆ  ಬಿ ಖಾತಾ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಗ್ರಾಮೀಣ ಪ್ರದೇಶಕ್ಕೆ  ಆದೇಶ  ಇರುವುದಿಲ್ಲ ಹಾಗಾಗಿ ಗ್ರಾಮೀಣ ಪ್ರದೇಶಕ್ಕೆ ಬಂದರೆ ಖಂಡಿತ ಮಾಡಿಕೊಡಲಾಗುವುದು ಎಂದು ಹೇಳಿದರು.  

ಮರು ಮಂಜೂರಾತಿ  ಆಗಿದ್ದರೆ ಮಾತ್ರ ಅವಕಾಶ: ಚಾಕರಿ ಜಮೀನನ್ನು ಮರು ಮಂಜೂರಾತಿ ಮಾಡಿಕೊಂಡಿದ್ದರೆ ಮಾತ್ರ ಪಹಣಿಯಲ್ಲಿ ಸರ್ಕಾರ ತೆರವುಗೊಳಿಸಲು ಬರುತ್ತದೆ. ಇಲ್ಲವಾದಲ್ಲಿ ಈಗ ಅದನ್ನು ತೆರವುಗೊಳಿಸಲು ಬರುವುದಿಲ್ಲ.  ಸರ್ಕಾರ ಮತ್ತೆ ಅವಕಾಶ ಕೊಟ್ಟರೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

819 ಮನೆಗಳ ವರದಿ ಸಲ್ಲಿಕೆ:  ಮಳೆಯಿಂದ ಹಾನಿಯಾದ 2,300 ಮನೆಗಳ ಪಟ್ಟಿ ಬ್ಲಾಕ್ ಆಗಿತ್ತು,  ನಿಗದಿತ ಸಮಯದಲ್ಲಿ ತಳಪಾಯ ಹಾಕದ ಹಿನ್ನಲೆಯಲ್ಲಿ ಅಂತಹ ಮನೆಗಳ ಪಟ್ಟಿ ಬ್ಲಾಕ್ ಆಗಿತ್ತು. ಈ  ಪೈಕಿ 819 ಮನೆಗಳ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.  ಎನ್‌.ಡಿ.ಆರ್‌.ಎಫ್‌. ಮಾರ್ಗಸೂಚಿ ಅನ್ವಯ ಅನುದಾನ ಮಂಜೂರಾಗಲಿದೆ ಎಂದು ತಿಳಿಸಿದರು.  

ಹಣ ನೀಡಬೇಡಿ: ಸರ್ಕಾರಿ ಆಸ್ಪತ್ರೆಗಳಲ್ಲಿ  ಉಚಿತ ಚಿಕಿತ್ಸೆ ನೀಡಲಾಗುವುದು, ಯಾರಿಗೂ ಹಣ ನೀಡದೇ ಚಿಕಿತ್ಸೆ  ಪಡೆದುಕೊಳ್ಳಬೇಕು. ಸಾರ್ವಜನಿಕರು  ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಯಾರಿಗೂ ಹಣ ನೀಡಬೇಡಿ ಎಂದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳಲ್ಲಿ  ಕಣ್ಣಿನ ಶಸ್ತ್ರ ಚಿಕಿತ್ಸೆ  ಸೇರಿದಂತೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಸುಕನ್ಯಾ ಸಮೃದ್ಧಿ ಯೋಜನೆ ಪಾಸ್ ಬುಕ್ ವಿತರಣೆ: ಇದೇ ಸಂದರ್ಭದಲ್ಲಿ  ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‌ಪುಸಕ್ತಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.   

ವಿವಿಧ ಕೌಂಟರ್ : ಜನಸ್ಪಂದನ ಕಾರ್ಯಕ್ರಮದ ಅಂಗವಾಗಿ  ಸಾರ್ವಜನಿಕರ ಅರ್ಜಿ ಸ್ವೀಕರಿಸಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ಆರಂಭಿಸಲಾಗಿತ್ತು. ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಂಬಂಧಿಸಿದ ಕೌಂಟರ್‌ಗಳಲ್ಲಿ ನೀಡುತ್ತಿದ್ದರು.  

105 ದೂರು :  ಕಂದಾಯ ಇಲಾಖೆಯ- 25,  ತಾಲೂಕು ಪಂಚಾಯತ್ -34,  ಸರ್ವೇ ಇಲಾಖೆ-15, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ -11, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-1,  ಹಾನಗಲ್ ಎಪಿಎಂಸಿ-01, ಹಾನಗಲ್ ಏತ ನೀರಾವರಿ ವಿಭಾಗ-05,  ಹಾನಗಲ್ ವಾಕರಸಾ ಸಂಸ್ಥೆ-01, ಸಮಾಜ ಕಲ್ಯಾಣ ಇಲಾಖೆ-02,  ಹಾನಗಲ್ ಪಂಚಾಯತ್ ರಾಜ್ ಇಂಜನೀಯರಿಂಗ್  ವಿಭಾಗ-01,  ಹೆಸ್ಕಾಂ -08, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ -01   ಸೇರಿದಂತೆ 105 ಅರ್ಜಿಗಳು ಸಲ್ಲಿಕೆಯಾಗಿವೆ.   ಹಾನಗಲ್ ಕಂದಾಯ ಇಲಾಖೆ 11  ಹಾಗೂ ತಾಲೂಕು ಪಂಚಾಯತ್ 10 ಸೇರಿದಂತೆ 21 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು.  

ಕಾರ್ಯಕ್ರಮದಲ್ಲಿ ಆಡೂರ ಗ್ರಾ.ಪಂ. ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ,  ಅಕ್ರಮ-ಸಕ್ರಮ ಮತ್ತು ಬಗರಹುಕುಂ ಸಮಿತಿ ಸದಸ್ಯ ಪುಟ್ಟಪ್ಪ ನರೇಗಲ್ಲ,  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ತಹಸೀಲ್ದಾರ ರೇಣುಕ್ಕಮ್ಮ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ತಾ.ಪಂ.ಮಾಜಿ ಸದಸ್ಯ ಎನ್‌.ಪಿ.ಪೂಜಾರ,  ಇತರರು ಉಪಸ್ಥಿತರಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ  ಸಾಲಿಮಠ ಸ್ವಾಗತಿಸಿದರು.