ಜನ್ ಧನ್ ಮಹಿಳಾ ಖಾತಾದಾರರಿಗೆ 500 ರೂ ಬಿಡುಗಡೆ

ನವದೆಹಲಿ, ಏ 3,ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಜನ್ ಧನ್ ಯೋಜನೆಯಡಿ ಖಾತೆ ಹೊಂದಿರುವ ಮಹಿಳಾ ಖಾತಾದಾರರಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಏಪ್ರಿಲ್ ತಿಂಗಳ 500 ರೂಪಾಯಿ ಎಕ್ಸ್ ಗ್ರೇಷಿಯಾ ಮೊತ್ತವನ್ನು ಬಿಡುಗಡೆ ಮಾಡಿದೆ.ಮಹಿಳಾ ಖಾತಾದಾರರಿಗೆ ಈಗಾಗಲೇ 500 ರೂಪಾಯಿ ವರ್ಗಾವಣೆಯಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನಡಿ ಮೂರು ತಿಂಗಳ ಕಾಲ ತಲಾ 500 ರೂಪಾಯಿ ಜಮಾ ಮಾಡುವುದಾಗಿ ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಜನ್ ಧನ್ ಮಹಿಳಾ ಖಾತೆದಾರರು ಹಣ ಪಡೆಯಲು ಬ್ಯಾಂಕು ಮತ್ತು ಎಟಿಎಂಗಳಲ್ಲಿ ಜನಜಂಗುಳಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಹೀಗಾಗಿ ಖಾತಾದಾರರು ಏಪ್ರಿಲ್ 9 ರ ನಂತರ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ ಗಳು ತನ್ನ ಖಾತೆದಾರರಿಗೆ ಈ ಸಂಬಂಧ ಎಸ್.ಎಂ.ಎಸ್. ಮೂಲಕ ಮಾಹಿತಿ ಮತ್ತು ತಿಳುವಳಿಕೆ ನೀಡುವಂತೆಯೂ ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳು ಸಹ ತನ್ನ ಜಿಲ್ಲಾಡಳಿತ ಮತ್ತು ಪೊಲೀಸರ ಸಹಕಾರದ ಮೂಲಕ ಖಾತೆದಾರರಿಗೆ ಹಣ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳು ತನ್ನ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಬ್ಯಾಂಕ್ ಗಳ ಶಾಖೆಗಳಿಂದ ಹಣ ಪಡೆಯುವ ವಿಧಾನದ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.