ನವದೆಹಲಿ, ಡಿ.17: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.ಬಂಧಿತ 10 ಮಂದಿಯಲ್ಲಿ ಯಾರೂ ವಿದ್ಯಾರ್ಥಿಗಳಾಗಲೀ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರಾಗಲೀ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಸೋಮವಾರ ರಾತ್ರಿ ಬಂಧಿತರಾದ 10 ಮಂದಿ ಅಪರಾಧ ಹಿನ್ನೆಲೆಯವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಭಾನುವಾರ, ಜಾಮಿಯಾ ವಿಶ್ವವಿದ್ಯಾಲಯದ ಸಮೀಪ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ವೇಳೆ ನಾಲ್ಕು ಡಿಟಿಸಿ ಬಸ್ಸುಗಳು, ಹತ್ತು ಪೊಲೀಸ್ ಗಸ್ತು ಬೈಕುಗಳು ಮತ್ತು 100 ಖಾಸಗಿ ವಾಹನಗಳು ಹಾನಿಗೊಳಗಾಗಿತ್ತು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.ಜಿಲ್ಲೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 30 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ.