ಲಂಡನ್, ಜ 9 ,ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಗೆದ್ದಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೆ ಗಾಯದ ಬಿಸಿ ತಟ್ಟಿದೆ. ಹಿರಿಯ ವೇಗಿ ಜೇಮ್ಸ್ ಅಂಡರ್ಸನ್ ಅವರು ಪಕ್ಕೆಲುಬು ಗಾಯದಿಂದಾಗಿ ಟೆಸ್ಟ್ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.ಕೇಪ್ ಟೌನ್ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಅಂಡರ್ಸನ್ ಅವರು ತನ್ನ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು. ನಂತರ, ಅವರನ್ನು ಎಂ.ಆರ್.ಐ ಸ್ಕ್ಯಾನ್ ಗೆ ಒಳಪಡಿಸಲಾಗಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದ ಇನ್ನುಳಿದ ಭಾಗದಿಂದ ಅವರು ಹೊರಗುಳಿಯಲಿದ್ದಾರೆಂಬ ಬಗ್ಗೆ ಸ್ಪಷ್ಟವಾಗಿದೆ. ಕಳೆದ ಬೇಸಿಗೆಯಲ್ಲಿ ನಡೆದಿದ್ದ ಆ್ಯಷಸ್ ಸರಣಿಯಲ್ಲಿ ಗಾಯಕ್ಕೆ ಒಳಗಾಗಿದ್ದ ಜೇಮ್ಸ್ ಅಂಡರ್ಸನ್ ಚೇತರಿಸಿಕೊಂಡು ಎರಡು ಪಂದ್ಯಗಳು ಮಾತ್ರ ಆಡಿದ್ದರು. ಇದೀಗ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.
ಕಳೆದ ಐದು ತಿಂಗಳು ವಿಶ್ರಾಂತಿಯಲ್ಲಿದ್ದ ಅಂಡರ್ಸನ್ ಅವರು ಮರಳಿದ ಮೊದಲನೇ ಸರಣಿಯಲ್ಲಿಯೇ ಉತ್ತಮ ಬೌಲಿಂಗ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ ಅವರು ಏಳು ವಿಕೆಟ್ ಪಡೆದಿದ್ದರು. ಇದರ ಫಲವಾಗಿ ಇಂಗ್ಲೆಂಡ್ 189 ರನ್ ಗಳಿಂದ ಗೆದ್ದು ಸರಣಿ ಸಮಬಲ ಮಾಡಿಕೊಂಡಿದೆ.“ನ್ಯೂಲ್ಯಾಂಡ್ಸ್ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿರುವ ಜೇಮ್ಸ್ ಅಂಡರ್ಸನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆಂದು’’ ಇಸಿಬಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.584 ವಿಕೆಟ್ ಗಳನ್ನು ಪಡೆದಿರುವ ಜೇಮ್ಸ್ ಅಂಡರ್ಸನ್ ಅವರು ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೊದಲ ಸೀಮರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.