ಮನೆ ಹತ್ತಿರವೇ ಕೋವಿಡ್ ಆಸ್ಪತ್ರೆ : ಆತಂಕಗೊಂಡಿದ್ದ ನೆರೆಹೊರೆಗೆ ಜಗ್ಗೇಶ್ ಸಮಾಧಾನ ಮಾಡಿದ್ದು ಹೇಗೆ?

ಬೆಂಗಳೂರು, ಜುಲೈ 4: ಈಗಂತೂ ಎಲ್ಲಾ ಕಡೆ ಕೊರೋನಾದೆ ಭೀತಿ. ಹೀಗಿರೋವಾಗ ಮನೆ ಬಳಿಯೇ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಇದ್ರೆ ಮಾಡೋದೇನು?  ದಿನಕ್ಕೆ ಅದೆಷ್ಟೋ ಸಲ ಆಂಬುಲೆನ್ಸ್ ಓಡಾಡುತ್ತೆ, ಎಷ್ಟೋ ಕೋವಿಡ್ ಸೋಂಕಿತರು, ಶಂಕಿತರು ಬರ್ತಿರ್ತಾರೆ.  ಹೀಗಾಗಿ ಆತಂಕ ಸಹಜ.

  ಅಂದ ಹಾಗೆ ಈ ಆತಂಕ ಶುರುವಾಗಿದ್ದು ಮಲ್ಲೆಶ್ವರಂನಲ್ಲಿ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡೋ ಆಸ್ಪತ್ರೆಯಾಗಿ ಮಾರ್ಪಟ್ಟಿರೋ ಮಣಿಪಾಲ್ ಆಸ್ಪತ್ರೆ ಸಮೀಪವೇ ನಟ ಜಗ್ಗೇಶ್ ಮನೆ ಇದೆ.  ಅಲ್ಲದೆ ಅನೇಕ ನಟ ನಟಿಯರು, ಐಎಎಸ್‍, ಐಪಿಎಸ್ ಅಧಿಕಾರಿಗಳು ಮತ್ತಿತರರ ಮನೆಗಳೂ ಇವೆ.

  ಸೋಂಕು ಹೆಚ್ಚಾಗ್ತಿರೋ ಈ ಸಮಯದಲ್ಲಿ ಮನೆಗಳ ಸಮೀಪದಲ್ಲೇ ಆಸ್ಪತ್ರೆ ಇದೆ.  ನಮಗೂ ವಕ್ಕರಿಸಿಕೊಂಡ್ರೆ ಮಾಡೋದೇನು ಅಂತ ಮಣಿಪಾಲ್ ಆಸ್ಪತ್ರೆ ಬಳಿ ಇರೋ ಸಾರ್ವಜನಿಕರು ಆತಂಕದಲ್ಲಿದ್ದಾಗ ನಟ ಜಗ್ಗೇಶ್ ಧೈರ್ಯ ತುಂಬಿದ್ದಾರೆ.

  ಸಚಿವ ಅಶ್ವತ್ಥನಾರಾಯಣ್ ಅವರಿಗೆ ದೂರವಾಣಿ ಕರೆ ಮಾಡಿ ಜನವಸತಿ ಪ್ರದೇಶದ ಬಳಿ ಕೋವಿಡ್ ಸೋಂಕಿತರನ್ನು ಹೊತ್ತ ಆಂಬುಲೆನ್ಸ್ ಸಂಚರಿಸದ ಹಾಗೆ ಮನವಿ ಮಾಡಿಕೊಂಡಿದ್ದಾರೆ.  ಅಲ್ಲದೆ ಖುದ್ದು ನಿಂತು ಬ್ಯಾರಿಕೇಡ್ ಹಾಕಿಸಿದ್ದಾರೆ.

  “ಈ ಸಂದರ್ಭದಲ್ಲಿ ಮಣಿಪಾಲ್‍ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಡಿ ಅನ್ನೋಕೆ ಆಗಲ್ಲ.  ಇಲ್ಲಿನ ನಾಗರಿಕರಿಗೆ ಸೋಂಕು ಹರಡದಂತೆ ಯಾವ ಬಗೆಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನುವುದರ ಬಗ್ಗೆ ಆಲೋಚಿಸಿ, ಬ್ಯಾರಿಕೇಡ್ ಹಾಕಿಸಲಾಗಿದೆ” ಅಂತ ಜಗ್ಗೇಶ್ ಹೇಳಿದ್ದಾರೆ. ನವರಸ ನಾಯಕನ ಕಾರ್ಯವನ್ನು ಸಾರ್ವಜನಿಕರೂ ಸಹ ಶ್ಲಾಘಿಸಿದ್ದಾರೆ.