ಸದ್ಯಕ್ಕೆ ಜೆಡಿಎಸ್ ತೊರೆಯುವುದಿಲ್ಲ, ಮುಂದೇನಾಗಲಿದೆಯೋ ಗೊತ್ತಿಲ್ಲ; ರವೀಂದ್ರ ಶ್ರೀಕಂಠಯ್ಯ

ಬೆಂಗಳೂರು, ಡಿ.17ಸದ್ಯಕ್ಕೆ ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ,‌ ಮೂರೂವರೆ ವರ್ಷಗಳ ಬಳಿಕ  ಮುಂದೇನಾಗಲಿದೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸೂಚ್ಯವಾಗಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಜೆಡಿಎಸ್  ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ  ಪ್ರಶ್ನೆಯೇ ಇಲ್ಲ. ಜೆಡಿಎಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬ ವರದಿಗಳನ್ನು ಕಂಡು ಆಶ್ಚರ್ಯವಾಗಿದೆ. ಮುಂದಿನ ಮೂರೂವರೆ ವರ್ಷ ಜೆಡಿಎಸ್ ಶಾಸಕನಾಗಿ ಮುಂದುವರೆಯುತ್ತೇನೆ.  ನಂತರದ ದಿನಗಳಲ್ಲಿ ಏನು ಬದಲಾವಣೆಯಾಗುತ್ತದೆ ನೋಡೋಣ ಎಂದು ಅಡ್ಡಗೋಡೆ ದೀಪ ಇಟ್ಟಂತೆ ಹೇಳಿದರು.ಕೆ.ಆರ್.ಪೇಟೆ  ನಾರಾಯಣಗೌಡ ಅವರ ಗೆಲುವು ಮಂಡ್ಯ ಜಿಲ್ಲೆಯ ಒಂದಿಷ್ಟು ಜೆಡಿಎಸ್ ಶಾಸಕರಿಗೆ ಬಿಜೆಪಿಯ  ಮತ್ತೊಂದು ಹಂತದ ಆಪರೇಷನ್ ಕಮಲಕ್ಕೆ ಸಹಕಾರಿಯಾಗಲಿದ್ದು, ಯಡಿಯೂರಪ್ಪ ಪುತ್ರ ವಿಜಯೇಂದ್ರ  ರವೀಂದ್ರ ಶ್ರೀಕಂಠಯ್ಯ ಅವರಿಗೂ ಗಾಳ ಹಾಕಿದ್ದಾರೆ ಎನ್ನಲಾಗಿತ್ತು. ಆದರೆ ಬಿಜೆಪಿ  ಸೇರ್ಪಡೆ ವಿಚಾರವನ್ನು ರವಿಂದ್ರ ಶ್ರೀಕಂಠಯ್ಯ ಸದ್ಯಕ್ಕೆ ತಳ್ಳಿಹಾಕಿದ್ದಾರೆ.