ಬೆಂಗಳೂರು, ಆ 22 ಮುಂದಿನ ಸಚಿವ ಸಂಪುಟ ವಿಸ್ತರಣೆ ಒಳಗೆ ತಮಗೆ ಮಂತ್ರಿ ಸ್ಥಾನ ಸಿಗದಿದ್ದರೆ ತಮ್ಮ ನಡೆ ಮನೆ ಕಡೆಗೆ ಎಂದು ಹೇಳಿಕೆ ನೀಡಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮರಳಿ ಜೆಡಿಎಸ್ಗೆ ಹೋಗುತ್ತಾರೆ ಎಂಬ ರಾಜಕೀಯ ವಲಯದಲ್ಲಿ ಹರಡಿರುವ ಸುದ್ದಿಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತಳ್ಳಿಹಾಕಿದ್ದಾರೆ
ಈ ಮೊದಲು ಜೆಡಿಎಸ್ನಲ್ಲಿದ್ದ ಉಮೇಶ್ ಕತ್ತಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಸೇರಿದ್ದರು. ಪ್ರಸ್ತುತ ಸಂಪುಟ ವಿಸ್ತರಣೆ ನಂತರ ಬಿಜೆಪಿ ಪಾಳಯದಲ್ಲಿ ಸೃಷ್ಟಿಯಾಗಿರುವ ಅಸಮಾಧಾನವನ್ನು ಲಾಭ ಪಡೆಯಲು ಹವಣಿಸುತ್ತಿರುವ ಜೆಡಿಎಸ್ ಅಸಮಾಧಾನಿತರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ.
ಸಚಿವ ಸ್ಥಾನದಿಂದ ವಂಚಿತರಾಗಿರುವ ಉಮೇಶ್ ಕತ್ತಿ ಅವರನ್ನು ಮೇಲ್ಮನೆ ಜೆಡಿಎಸ್ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಮರಳಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕತ್ತಿ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿತ್ತು.
ಆದರೆ ಇದು ಊಹಾಪೋಹದ ಸುದ್ದಿ. ಕುಮಾರಸ್ವಾಮಿ ಅವರನ್ನು ಕತ್ತಿ ಭೇಟಿಯಾಗಿಲ್ಲ. ಉಮೇಶ್ ಕತ್ತಿ ಜೆಡಿಎಸ್ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮದು ಸಣ್ಣ ಪಕ್ಷ. ಸಣ್ಣ ಪ್ರಾದೇಶಿಕ ಪಕ್ಷವನ್ನು ಸಂಘಟಿಸಿಕೊಂಡು ಹೋಗುತ್ತೇವೆ. ಸದ್ಯಕ್ಕೆ ನಮ್ಮನ್ನ ಬಿಟ್ಟು ಬಿಡಿ ಎಂದು ದೇವೇಗೌಡ ಸುದ್ದಿಗಾರರಿಗೆ ಬುಧವಾರ ಸ್ಪಷ್ಟಪಡಿಸಿದರು.
ಬುಧವಾರ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಮೈಸೂರು ಭಾಗದಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು ಎಂದು ಬಿಜೆಪಿ ಶಾಸಕ ರಾಮ್ ದಾಸ್ ಅವರ ಪರ ಪರೋಕ್ಷ ವಕಾಲತ್ತು ನಡೆಸಿದ್ದರು.