ಶಿವಾಜಿನಗರಕ್ಕೆ ಜೆಡಿಎಸ್ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಗೆಲುವು ಸಾಧಿಸಲೆಂದೆ ಸ್ಪರ್ಧೆ-ತನ್ವೀರ್ ಅಹ್ಮದ್‌

Tanveer Ahmed

ಬೆಂಗಳೂರು, ನ. 30 - ಯಾರನ್ನೋ ಸೋಲಿಸಲೆಂದು ತಾವು ಕಣಕ್ಕಿಳಿದಿಲ್ಲ. ಗೆಲುವು ಸಾಧಿಸಬೇಕೆಂದೇ ಸ್ಪರ್ಧಿಸಿರುವುದಾಗಿ ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್‌ವುಲ್ಲಾ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಶಿವಾಜಿನಗರ ಕ್ಷೇತ್ರಕ್ಕೆ ಪಕ್ಷದಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಿವಾಜಿನಗರ ಕ್ಷೇತ್ರದಲ್ಲಿ ಎಲ್ಲಾ ಮಾದರಿಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು, ಆರೋಗ್ಯ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಶೇ.80ರಷ್ಟು ನೀರನ್ನು ಉಳಿತಾಯ ಮಾಡುವಂತಹ ಯೋಜನೆಗಳು ಸಹ ಪ್ರಣಾಳಿಕೆಯಲ್ಲಿವೆ. ಶಿವಾಜಿನಗರದ ಸಮಗ್ರ ಅಭಿವೃದ್ಧಿಗಾಗಿ ತಾವು ಪಕ್ಷದ  ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿರುವುದಾಗಿ ತನ್ವೀರ್ ಅಹ್ಮದ್ ಹೇಳಿದರು.

ಶಿವಾಜಿನಗರದಲ್ಲಿ ತಾವು ಸ್ಪರ್ಧಿಸದಂತೆ ತಡೆಯಲು ವಿರೋಧಿಗಳು ಭಯ ಹುಟ್ಟಿಸುವಂತಹ ಕೆಲಸಗಳನ್ನು ಮಾಡಿದರು. ಆದರೂ ತಾವು ಯಾವುದಕ್ಕೂ ಬೆದರದೆ ಸ್ಪರ್ಧಿಸಿರುವುದಾಗಿ ಹೇಳಿದ ತನ್ವೀರ್ ಅಹ್ಮದ್‌ವುಲ್ಲಾ, ಪಕ್ಷದ ವರಿಷ್ಠರು ಶಾಸಕಾಂಗ ಪಕ್ಷದ ನಾಯಕರು ರಾಜ್ಯಕ್ಕೆ ಹಲವು ಅಭಿವೃದ್ಧಿ‌ ಕೆಲಸಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಅವರ ಜನಪರ ಕಾಳಜಿ ಜನಾನುರಾಗ ತಮ್ಮ ಮೇಲೆ ಜನರಿಗೆ ವಿಶ್ವಾಸ ಮೂಡಿಸಿದೆ ಎಂದರು.

ಕ್ಷೇತ್ರದಲ್ಲಿ ತಾವು ಇನ್ಯಾರನ್ನೋ ಗೆಲ್ಲಿಸಲೋ ಅಥವಾ ಸೋಲಿಸಲೆಂದು ಕಣಕ್ಕಿಳಿದಿಲ್ಲ. ಜೆಡಿಎಸ್‌ ಚಿಹ್ನೆಯಡಿ ಕಣಕ್ಕಿಳಿದಿರುವ ತಾವು ಗೆಲುವು ಸಾಧಿಸುವುದಕ್ಕಾಗಿಯೇ ಸ್ಪರ್ಧಿಸಿದ್ದು. ಪ್ರಾದೇಶಿಕ ಪಕ್ಷದ ಅವಶ್ಯಕತೆ ಈ ರಾಜ್ಯ ಸೇರಿದಂತೆ ಕ್ಷೇತ್ರಕ್ಕೂ ಅವಶ್ಯಕತೆಯಿದೆ. ಹೀಗಾಗಿ ಪಕ್ಷ ತಮಗೆ ಬಿ.ಫಾರಂ‌ ನೀಡಿದೆ. ಜನರಿಗೆ ತಮ್ಮ ಮೇಲೆ ವಿಶ್ವಾಸ ಇದ್ದು ತಮ್ಮನ್ನು ಬೆಂಬಲಿಸಿದ್ದಾರೆ. ತಮಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವ ಪಕ್ಷದ ನಾಯಕರಿಗೆ ತನ್ವೀರ್ ಧನ್ಯವಾದಗಳನ್ನು ಅರ್ಪಿಸಿದರು.