ಪೌರತ್ವ ತಿದ್ದುಪಡಿ ಕಾಯಿದೆಗೆ ಜೆಡಿಎಸ್‌ನ ತೀವ್ರ ವಿರೋಧವಿದೆ: ಶಾಸಕ ಶಿವಲಿಂಗೇಗೌಡ

ಬೆಂಗಳೂರು.12 ಅನರ್ಹರನ್ನು ಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ಈ  ಉಪಚುನಾವಣೆಯಲ್ಲಿ ಮಂತ್ರಹಾಕಿ ಗೆಲುವು ಸಾಧಿಸಿದ್ದಾರೆ ಎಂದು ಜೆಡಿಎಸ್ ಶಾಸಕ  ಶಿವಲಿಂಗೇಗೌಡ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಅಧಿಕಾರದಲ್ಲಿರುವ ಪಕ್ಷವೇ ಉಪಚುನಾವಣೆಯಲ್ಲಿ ಗೆಲ್ಲುವುದು ಸಹಜ ಎನ್ನುವುದು  ಹಿಂದಿನಿಂದಲೂ ತಿಳಿದುಬಂದಿದೆ. ಜನ ಯಡಿಯೂರಪ್ಪನವರನ್ನು ಈ ಉಪಚುನಾವಣೆಯಲ್ಲಿ  ಬೆಂಬಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಷ್ಟೇ. ಹೇಗೆ ಗೆದ್ದರು, ಏನೆಲ್ಲಾ ಮಾಡಿದರು ಎನ್ನುವುದನ್ನು ಹೇಳಲು ಆಗುವುದಿಲ್ಲ. ಅದು ಮಾಧ್ಯಮಗಳಿಗೂ ಚೆನ್ನಾಗಿ ಗೊತ್ತಿದೆ ಎಂದು  ಮಾರ್ಮಿಕವಾಗಿ ಹೇಳಿದರು.ಜೆಡಿಎಸ್ ಪಕ್ಷ ನೆಲೆಯನ್ನು ಎಲ್ಲಿಯೂ ಕಳೆದುಕೊಂಡಿಲ್ಲ. ಕೆ.ಆರ್.ಪೇಟೆಯಲ್ಲಿಯೂ ನಮಗೆ ಇರುವ ಸ್ಥಾನ ಇದ್ದೇ ಇದೆ. ಇವಿಎಂ ದುರುಪಯೋಗ ಬಗ್ಗೆ ನಮಗೆ ಸಂದೇಹವಿಲ್ಲ ಎಂದರು.ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಭೇಟಿ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟವರು ಅವರು. ಹೀಗಾಗಿ ಅವರ  ರಾಜಕೀಯ ಸೇವೆ ಇನ್ನೂ ರಾಜ್ಯಕ್ಕೆ ಬೇಕಿದೆ. ಅವರು ಶೀಘ್ರ ಗುಣಮುಖರಾಗಲಿ, ಭಗವಂತ  ಅವರಿಗೆ  ಒಳ್ಳೆಯದು ಮಾಡಲಿ ಎಂದು ಹಾರೈಸಿದರು.ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಬೇಕಾದರೆ ಕಳಿಸಲಿ. ಆದರೆ ಇಲ್ಲಿಯೇ ಬಂದು ನೆಲೆಸಿರುವವರನ್ನು ಕಳಿಸುವುದು ಸರಿಯಲ್ಲ. ಕಳಿಸುವುದಿದ್ದರೆ ಎಲ್ಲರನ್ನೂ ಕಳಿಸಲಿ.ಕೆಲವರನ್ನು ಬಿಟ್ಟು, ಇನ್ನು ಕೆಲವರನ್ನು ಮಾತ್ರ ಕಳುಹಿಸಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಎಲ್ಲರಿಗೂ ಪೌರತ್ವ ನೀಡಿ ಆದರ್ಶವಾಗಲಿ. ಕೇಂದ್ರದ‌ ಈ ತಿದ್ದುಪಡಿ ಕಾಯಿದೆಗೆ ಜೆಡಿಎಸ್‌ನ ತೀವ್ರ ವಿರೋಧವಿರುವುದಾಗಿ ಹೇಳಿದರು.