!!ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ !!
ಮಹಾಲಿಂಗಪುರ: ಎಪ್ಪಾ ಬ್ಯಾಡ್ರ್ಯೋ ಕಂಡಾಪಟ್ಟಿ ದೇನೆ ಮಾಡೆ ಪತ್ರಾಸ್ ಬಡದ ಇರಾಕ್ ಮನಿ ಮಾಡಕೊಂಡೆವರ್ಯೋ ಕೆಡುವ ಬ್ಯಾಡ್ರ್ಯೋ ನನಪ್ಪಗೋಳ್ರ್ಯಾ ಎಂದು 13 ನೇ ವಾರ್ಡ್ ಹೆಣ್ಣು ಮಕ್ಕಳು ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ಮುಂದೆ ಕಣ್ಣೀರು ಹಾಕುತ್ತ ಗೋಗರೆಯುತ್ತಿದ್ದರು.
ಕೆಂಗೇರಿ ಮಡ್ಡಿ ಬಡಾವಣೆಯ ಸಾಯಿ ಮಂದಿರ ಹಿಂದೆ ಪುರಸಭೆ ಜಾಗೆಯಲ್ಲಿ 5 ವರ್ಷಗಳಿಂದ ಮಹಾಲಿಂಗಪುರ ಪಟ್ಟಣದ ಕೆಲವು ನಿರ್ವಸ್ತಿಕರು ಪತ್ರಾಸ್ ಶೆಡ್ ಗಳನ್ನು ಹಾಕಿಕ್ಕೊಂಡು ವಾಸವಿದ್ದರು. ಏಕಾಏಕಿ ಮಂಗಳವಾರ ಬೆಳ್ಳಂಬೆಳಗ್ಗೆ ಜೆಸಿಬಿ ಬಳಸಿ ರಬಕವಿ ಬನಹಟ್ಟಿ ತಹಶೀಲ್ದಾರ್ ಗೀರೀಶ್ ಸ್ವಾದಿ ಅವರು ತೆರವು ಕಾರ್ಯಾಚರಣೆ ನಡೆಸಿರುವರು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಮಂಗಳವಾರ ಶೆಡ್ ಗಳ ತೆರವು ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಜೆಸಿಬಿ, ಭದ್ರತೆಗೆ ಪೋಲೀಸ್ ಮತ್ತು ವಿಧ್ಯುತ್ ಕಡಿತಗೊಳಿಸಲು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತಾಲೂಕಾಡಳಿತ ಸೋಮವಾರ ರಾತ್ರಿಯೇ ವ್ಯವಸ್ಥೆಗೊಳಿಸಿಕ್ಕೊಂಡಿತ್ತು ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ಇದನ್ನು ಮನಗಂಡ ಇವರು ಯಾವ ಸಮಯದಲ್ಲಾದರೂ ನಮ್ಮ ಮನೆಗಳ ಮೇಲೆ ಗದಾ ಪ್ರಹಾರ ನಡೆಸಬಹುದು ಎಂಬ ಹೆದರಿಕೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ಅಹೋರಾತ್ರಿ ಮಲಗದೆ ಮನೆಗಳ ಹೊರಗೆ ಜಾಗರಣೆ ಮಾಡಿದ್ದಾರೆ.
ಬೆಳಗು ಹರಿಯುವ ಮುನ್ನವೇ ಅಪಾರ ಸಂಖ್ಯೆಯ ಪೋಲೀಸ್ ಭದ್ರತೆಯಲ್ಲಿ ಜೆಸಿಬಿಗಳು ತಮ್ಮ ತೆರವು ಕಾರ್ಯಾಚರಣೆ ಆರಂಭಿಸಿವೆ. ಮನೆ ಕಳೆದುಕೊಂಡಡವರು ಕನಿಷ್ಟ ಇಲ್ಲವೆಂದರೂ 5,6 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಶೆಡ್ ಗಳನ್ನು ನಿರ್ಮಿಸಿಕ್ಕೊಂಡಿದ್ದರು. ಎರಡು, ಮೂರು ಗಂಟೆಗಳಲ್ಲಿ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿ ತೆರುವುಗೊಳಿಸಿದ ಪರಿಣಾಮ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿತು.
ಇದನ್ನು ತಡೆಯಲು ಸ್ಥಳೀಯರು ಪೋಲೀಸ್ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಮುಖಂಡರಿಗೆ ಅಳುತ್ತ ಕರೆಯುತ್ತ ಮನವಿ ಮಾಡಿಕ್ಕೊಂಡಿದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದ ತಹಶೀಲ್ದಾರ್ ರು ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಿಸ್ಸಹಾಯಕರಾಗಿ ಕಣ್ಣೀರು ಹಾಕುತ್ತ ಮುಂದೆ ಏನಪ್ಪಾ ನಮ್ಮ ಭವಿಷ್ಯ ಎಂದು ತಮ್ಮಲ್ಲೇ ಗೊಣಗುತ್ತಾ ಬಂದವರ ಮುಂದೆ ಕೈ ಚಾಚಿ ನಮ್ಮ ಮನಿಗೋಳ ಉಳಸರಿ ಎಪ್ಪಾ ಎನ್ನುವ ದೃಶ್ಯ ಮನಕಲಕುವಂತಿತ್ತು.
ಅತಿಕ್ರಮಣ ಮಾಡಿ ಹಾಕಿಕ್ಕೊಂಡ 29/01 ಸರ್ವೆ ನಂಬರ್ 3 ಎಕರೆ 6 ಗುಂಟೆ ಖಾಲಿ ಬಿದ್ದ ಜಾಗೆ ಕಂದಾಯ ಇಲಾಖೆಗೆ ಸಮ್ಮಂಧಿಸಿದ್ದು ನಿಜ. ಇಲ್ಲಿ ಮನೆ ಇಲ್ಲದ 33 ಕುಟುಂಬಗಳು ಹಲವಾರು ವರ್ಷಗಳಿಂದ ಅನಧಿಕೃತವಾಗಿ ಪತ್ರಾಸ್ ಶೆಡ್ ಗಳನ್ನು ನಿರ್ಮಿಸಿಕ್ಕೊಂಡು ಜೀವನ ಸಾಗಿಸುತ್ತಿದ್ದರು.
2024 ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪುರಸಭೆಗೆ ಬರೆದ ಮನವಿಯಲ್ಲಿ ಈ ಅನಧಿಕೃತ ಶೆಡ್ ನಿರ್ಮಾಣಗಳಲ್ಲಿ ಪ್ರಭಾವಿಗಳಿಂದ ಹಣದ ಅಕ್ರಮವಲ್ಲದೆ ಕೆಲವು ಜನ ಈಗಾಗಲೇ ಮನೆಗಳನ್ನು ಸಹ ಹೊಂದಿದ್ದು ಮತ್ತು ಸ್ಥಿತಿವಂತರಿದ್ದು ಅವರನ್ನು ಇಲ್ಲಿಂದ ತೆರುವುಗೊಳಿಸಬೇಕು ಸೂರು ಇಲ್ಲದವರಿಗೆ ಬೇರೆಡೆ ಸ್ಥಳಾವಕಾಶ ಮಾಡಿಕೊಡಬೇಕೆಂದು ನಿವೇದನೆ ಮಾಡಿಕ್ಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಈಗಾಗಲೇ ಕೆಂಗೇರಿಮಡ್ಡಿ ಸೇರಿ ಪಟ್ಟಣದಾದ್ಯಂತ ಅನೇಕರು ಅನಧಿಕೃತವಾಗಿ ಸರ್ಕಾರಿ ಜಾಗೆಗಳಲ್ಲಿ ವಾಸ ಮಾಡುತ್ತಿದ್ದಾರೆ.ಇಲ್ಲಿ ಇವರಿಗೆ ತೋರಿದ ಮಾನವೀಯತೆಯನ್ನೇ ಅತಿಕ್ರಮ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಪಟ್ಟಣದಲ್ಲಿ ಯಾವುದೇ ಸೂರಿಲ್ಲದ ನಿರಾಶ್ರಿತರಿಗೆ ಸರ್ಕಾರಿಯ ಜಾಗೆಯಲ್ಲಿ ಬದುಕು ಸಾಗಿಸಲು ಅನುವು ಮಾಡಿ ಕೊಟ್ಟು ಜಿಲ್ಲಾಡಳಿತ (ಸರ್ಕಾರ) ಮಾನವೀಯತೆಯನ್ನು ಮೆರೆಯಬೇಕು.