ಮಾ 7 ರಂದು ಜನೌಷಧಿ ದಿವಸ್

 ನವದೆಹಲಿ, ಮಾ 7, ಪ್ರಧಾನಮಂತ್ರಿ ನರೇಂದ್ರ ಮೋದಿ ಜನೌಷಧಿ ದಿವಸ್ ಕಾರ್ಯಕ್ರಮದಲ್ಲಿ ಶನಿವಾರ ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ.      ಈ ಸಂದರ್ಭದಲ್ಲಿ ಅವರು, ಏಳು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.   ಯೋಜನೆಯ ಸಾಧನೆಗಳ ಆಚರಣೆ ಮತ್ತು ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 7 ರಂದು ದೇಶಾದ್ಯಂತ ಜನೌಷಧಿ ದಿವಸ್ ಆಚರಿಸಲಾಗುತ್ತಿದೆ.   

         ಪ್ರತಿ ಜನೌಷಧಿ ಮಳಿಗೆಯಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶವನ್ನು ದೂರದರ್ಶನ ವಾಹಿನಿ ಮೂಲಕ ಪ್ರಸಾರ ಮಾಡಲಾಗುವುದು. ಆಯ್ದ ಮಳಿಗೆಗಳಲ್ಲಿ ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ಔಷಧ ಮಾರಾಟಗಾರರು ಹಾಗೂ ಫಲಾನುಭವಿಗಳೊಂದಿಗೆ ಸಂವಾದ ನಡೆಯಲಿದೆ.  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಉತ್ತರಪ್ರದೇಶದ ವಾರಣಾಸಿಯಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  2019-20 ನೇ ಸಾಲಿನಲ್ಲಿ ಈ ಮಳಿಗೆಗಳಿಂದ 390  ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಜನಸಾಮಾನ್ಯರಿಗೆ 2200 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಮೂಲಗಳು ತಿಳಿಸಿವೆ.  ಉತ್ತಮ ಗುಣಮಟ್ಟದ ಔಷಧಗಳು ಬಡವರು, ದುರ್ಬಲ ವರ್ಗದವರು ಸೇರಿದಂತೆ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗಿದೆ.