ಸುಮ್ಮನೆ ಕುಳಿತು ಮಹಾಭಾರತವನ್ನು ಕಣ್ಮುಚ್ಚಿ ಮೆಲಕು ಹಾಕುತ್ತಿದ್ದವಳಿಗೆ ಕಣ್ಣಿಗೆ ಕಂಡಿದ್ದು ನೂರು ಜನರ ಕೌರವರ ಸಾವು. ಕೌರವರ ಸಾವಿನ ಕಾರಣವೇನು ಎನ್ನುವದು ಗೊತ್ತಿರುವಂಥದ್ದೆ. ಅವರ ಆಲೋಚನೆಗಳೇ ಅವರಿಗೆ ಸೋಲು ತಂದುಕೊಟ್ಟಿದ್ದು. ಪ್ರತಿಷ್ಠೆ, ದುರಹಂಕಾರ, ಸ್ವಾರ್ಥ ಎಲ್ಲವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದು ಹೆಮ್ಮರವಾಗಿ ಕೊನೆಗೆ ತನ್ನದೇ ದಾಯಾದಿಗಳ ಜೊತೆ ಹೋರಾಟಕ್ಕೆ ನಿಂತು ಬಿಟ್ಟವರು. ಕುರುಕ್ಷೇತ್ರ ಯುದ್ಧ ಆರಂಭವಾಗುವ ಮೊದಲೆಲ್ಲ ಗೆಲುವು ಕಂಡಿದ್ದು ಕೌರವರೆ. ಒಂದಾದ ಮೇಲೆ ಒಂದರಂತೆ ಸೋಲುತ್ತ ಬಂದವರು ಪಾಂಡವರು. ಸೋಲುತ್ತಿದ್ದೇವೆ ಎಂದು ತಿಳಿಯದೇ ಸೋತಿದ್ದು ಒಂದು ಕಡೆಯಾದರೆ ಸೋಲುತ್ತೇವೆ ಎಂದು ಗೊತ್ತಿದ್ದರೂ ಸೋಲಿಗಾಗಿ ನಿಂತಿದ್ದು ಮತ್ತೊಂದುಕಡೆ. ತಮ್ಮ ಕೊನೆಗಾಣಿಸಲು ಅರಗಿನ ಮನೆಯೊಂದು ಸಿದ್ಧವಾಗಿದ್ದು ಅವರಿಗೆ ಗೊತ್ತಿಲ್ಲದೇ ಸೋಲಿಸಲು ಹಾಕಿದ ತಂತ್ರ. ಆದರೆ ಪಗಡೆಯಾಟದ ಸಂದರ್ಭದಲ್ಲಿ ತಮ್ಮನ್ನು ಹಣಿಯುತ್ತಿದ್ದಾರೆ, ಸಂಪೂರ್ಣ ನಿಸ್ಸಾಹಾಯಕರನ್ನು ಮಾಡಿ ತಮ್ಮಿಂದ ಎಲ್ಲವನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಸೋಲುತ್ತೇವೆ ಎಂದು ನಿಂತಿದ್ದರು. ಹಾಗಾಗಿ ಪಾಂಡವರು ಮೇಲಿಂದ ಮೇಲೆ ಸೋತರು. ಕೌರವರು ಸೋಲಿಸುತ್ತಿದ್ದೇವೆ ಎಂದು ಬೀಗಿದರು.
ಅವತ್ತಿನ ಆ ಎರಡು ದಾಯಾದಿ ಕಲಹ ಇಂದಿಗೂ ಏನು ನಿಂತಿಲ್ಲ. ಪ್ರತೀ ಮನುಷ್ಯನಿಗೂ ಇನ್ನೊಂದು ಮನುಷ್ಯನಿಂದ ಪ್ರೀತಿ, ಪ್ರೋತ್ಸಾಹ, ಸಹಾಯ ಎಲ್ಲವೂ ಬೇಕಾಗಿರುತ್ತದೆ. ಆದರೆ ಅವೆಲ್ಲವೂ ತನ್ನ ಹತ್ತಿರದವರಾದ ಬಂಧುಗಳಲ್ಲಿಯೇ ಸಿಕ್ಕಿ ಬಿಡುತ್ತದೆ ಎನ್ನುವ ನೀರೀಕ್ಷೆ ಮಾತ್ರ ಸುಳ್ಳು. ತನ್ನ ನೆಂಟರು, ದಾಯಾದಿ, ದೊಡ್ಡಪ್ಪ-ಚಿಕ್ಕಪ್ಪ, ಮಾವ ಅತ್ತೆ ಇವರೆಲ್ಲ ನಮ್ಮ ಸಹಾಯಕ್ಕೆ ಬಂದು ಬಿಡುತ್ತಾರೆ ಎನ್ನುವ ನೀರೀಕ್ಷೆ ಇದೆಯಲ್ಲ ಅದುವೆ ನಮ್ಮ ಸೋಲಿಗೆ ಕಾರಣ. ಎಲ್ಲರೂ ನಮ್ಮ ಸೋಲಿಗಾಗಿ ಕಾಯುತ್ತಾರೆ ಎನ್ನುವ ಅರ್ಥ ಹೇಳಲು ಹೊರಟಿಲ್ಲ. ಆದರೆ ತಮ್ಮವನೊಬ್ಬ ಮೇಲೆ ಎದ್ದು ನಿಲ್ಲುತ್ತಾನೆ ಎನ್ನುವಾಗ ಹೇಗಾದರೂ ಕೆಳಗುರುಳಿಸಬೇಕೆನ್ನುವ ಮಾತೇ ಅಲ್ಲಿಂದ ಬರುವುದು.
ಪರಿಚಯಸ್ಥರ ಮನೆಗೆ ಹೋದಾಗ ಹಿರಿಯರೊಬ್ಬರು ಮಾತಿಗೆ ಸಿಕ್ಕಿದರು. ಈಗ ಅವರಿಗೆ ತೊಂಬತ್ತೇಳು ವರ್ಷ. ಎರಡು ತಿಂಗಳ ಹಿಂದೆ ಒಮ್ಮೆ ಜಾರಿ ಬಿದ್ದು ಈಗ ನಡೆಯಲು ಸಾಧ್ಯವಿಲ್ಲ. ಮಾತು ತೊದಲುತ್ತದೆ. ಕುಳಿತಲ್ಲಿಯೇ ಊಟ ಉಪಚಾರ. ಆದರೆ ಬುದ್ಧಿ ಮಾತ್ರ ತುಂಬಾ ಚುರುಕು. ಅವರು ತಮ್ಮ ಗತಜೀವನವನ್ನು ನಿಧಾನವಾಗಿ ಬಿಚ್ಚಿಟ್ಟರು. ಅವರ ಹನ್ನೆರಡನೇ ವಯಸ್ಸಿಗೆ ತಂದೆ ತೀರಿಕೊಂಡರು. ಮೂರು ಗಂಡುಮಕ್ಕಳು ಇಬ್ಬರು ಹೆಣ್ಣು ಮಕ್ಕಳಿಗೆ ಇವರು ಅಣ್ಣ. ತಾಯಿ ಅಷ್ಟೇನು ಜಾಣೆಯಲ್ಲ. ದೊಡ್ಡ ಸಂಸಾರದ ನೊಗ ಹೊತ್ತ ಇವರು ತನಗಿಂತ ಕಿರಿಯರಿಗೆಲ್ಲ ಒಳ್ಳೆಯ ಶಿಕ್ಷಣ ಕೊಡಿಸಲು ಸಾಕಷ್ಟು ದುಡಿದರು. ತಂಗಿಯರ ಮದುವೆ ಮಾಡಿದರು. ತಮ್ಮಂದಿರು ಕಲಿಯಲು ಮದುವೆಯಾಗಲು ಇವರೇ ಹೆಗಲು ಕೊಟ್ಟರು. ಆದರೆ ಅವರೆಲ್ಲ ಈಗ ಈ ವ್ಯಕ್ತಿಯತ್ತ ಸುಳಿಯುವುದು ಇಲ್ಲ. ಕಾರಣ ತಾಯಿಯ ಹೆಸರಲ್ಲಿದ್ದ ಒಂದು ಎಕರೆ ಜಮೀನು. ಅಪ್ಪ ಸಾಯುವಾಗ ಒಂದು ಸ್ವಂತ ಮನೆಯೂ ಇರಲಿಲ್ಲ. ಎಲ್ಲೆಲ್ಲಿಯೋ ಕೆಲಸ, ಅಲೆದಾಟ. ಅದರ ಜೊತೆ ಬಡತನಕ್ಕೆ ನೆಂಟರಿಷ್ಟರ ಕುಹಕ ಮಾತು. ಒಡಹುಟ್ಟಿದವರಿಗಾಗಿ ಮದುವೆಯೂ ಆಗದೇ ವಿಧಿ ಕೊಟ್ಟ ಪೆಟ್ಟಿನ ಸೋಲನ್ನು ಗೆಲುವಾಗಿಸಿಕೊಳ್ಳಲು ಹರಸಾಹಸ ಪಟ್ಟ ಜೀವ ಇವರದ್ದು. ಕೊನೆಯ ತಮ್ಮನ ಮದುವೆಯ ಸಮಯದಲ್ಲಿ ತಮ್ಮದೇ ಹಣದಿಂದ ಒಂದು ಎಕರೆ ಜಮೀನನ್ನು ತಾಯಿಯ ಹೆಸರಿನಲ್ಲಿ ಖರೀದಿಸಿದರು. ಅವರು ಮಾಡಿದ ತಪ್ಪು ಅದೇ ಆಗಿತ್ತು. ಅಲ್ಲಿಯವರೆಗೂ ಚೆಂದವಾಗಿದ್ದ ಆ ಮನೆಯಲ್ಲಿ ತಾಯಿ ಕೇವಲ ಆರು ತಿಂಗಳಿಗೆ ಕೊನೆ ಉಸಿರೆಳೆದರು. ಆ ಆಸ್ತಿಗಾಗಿ ತಮ್ಮ ತಂಗಿಯರು ಮುನಿಸಿಕೊಂಡರು. ಆ ಮುನಿಸಿಗೆ ತಾವು ಸಿಟ್ಟಾಗಿ ಮತ್ತಷ್ಟು ಜಮೀನನ್ನು ತಮ್ಮ ಹೆಸರಿಗೆ ಖರೀದಿಸಿದರು. ಅದರಿಂದ ಅವರಲ್ಲಿ ಈರ್ಷ್ಯೆ ಬೆಳೆಯಿತೆ ವಿನಹ ಪ್ರೀತಿ ಹುಟ್ಟಲಿಲ್ಲ. ಅಣ್ಣ ತಮಗಾಗಿ ಪಟ್ಟಿದ್ದ ಎಲ್ಲ ಕಷ್ಟವೂ ಗೌಣವಾಗಿ ಆಸ್ತಿಯೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಅದರ ಪರಿಣಾಮ ಇಳಿ ವಯಸ್ಸಿನ ಇವರು ತನ್ನ ಗೆಳೆಯನ ಮಗನ ಮನೆಯಲ್ಲಿ ಆಶ್ರಯ ಪಡೆದದ್ದಲ್ಲದೇ ಆ ಒಂದು ಎಕರೆ ಜಮೀನಿನ ಹೊರತಾಗಿ ಉಳಿದ ಎಲ್ಲ ಆಸ್ತಿಗೂ ಈ ಹುಡುಗನೇ ಹಕ್ಕುದಾರ ಎಂದು ವಿಲ್ ಬರೆಸಿದ್ದಾರೆ.
ಮನುಷ್ಯ ಎಷ್ಟು ವಿಕಾರಿ ಎಂದು ಅನ್ನಿಸುವುದಿಲ್ಲವೆ. ಅಂದು ಕುರುಕ್ಷೇತ್ರದಲ್ಲಿ ಆದ ಸಂಗತಿಗೂ ಇಂದು ಈ ಹಿರಿಯರಲ್ಲಿ ಆದ ಸಂಗತಿಯೂ ಏನಾದರೂ ಬದಲಾವಣೆ ಇದೆಯೇ! ಮನುಷ್ಯನ ಮೇಲಿನ ಪ್ರೀತಿ ಕೇವಲ ಆಸ್ತಿ, ಹಣ, ರಾಜ್ಯ ಇವುಗಳ ಪಡೆಯಲು ನಾಶವಾಗುತ್ತದೆ ಎಂದಾದರೆ ಪ್ರೀತಿ ಎನ್ನುವುದಕ್ಕೆ ಅರ್ಥ ಕೊಡಲು ಸಾಧ್ಯವೇ ಇಲ್ಲ. ಕಷ್ಟವೋ ಸುಖವೋ ಜೊತೆಯಾಗಿ ನಿಲ್ಲುತ್ತೇವೆ ಎನ್ನುವುದು ತುಂಬಾ ಅಪರೂಪ. ಹೆತ್ತ ತಂದೆತಾಯಿ ಮತ್ತು ಗಂಡ ಹೆಂಡತಿ ಇವೆರಡು ಸಂಬಂಧ ಹೊರತು ಪಡಿಸಿದರೆ ಮಿತ್ರತ್ವದಲ್ಲಿ ಕಾಣಬಹುದು ಎಂದು ಹಿರಿಯರು ಹೇಳುತ್ತಾರೆ. ಒಮ್ಮೊಮ್ಮೆ ವಿಚಾರ ಮಾಡಿದಾಗ ಇದು ಸತ್ಯ ಎನ್ನಿಸುತ್ತದೆ. ಕಷ್ಟಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಒಗೆಯುತ್ತಾರೆಯೇ ಹೊರತು ಸಹಾಯಕ್ಕೆ ನಿಲ್ಲುವುದಿಲ್ಲ. ಸನ್ಮಿತ್ರನಾದವನು ತನ್ನ ಕಷ್ಟವನ್ನು ಹೇಳಿಕೊಳ್ಳದೆ ತನ್ನ ಮಿತ್ರನಿಗೆ ಆದ ಕಷ್ಟವನ್ನು ಬಗೆಹರಿಸಲು ಸಾಕಷ್ಟು ಕಷ್ಟಪಡುವುದು ನೋಡಿದ್ದೇವೆ.
ಮನುಷ್ಯ ಮನುಷ್ಯನ ಮಧ್ಯ ಹಣ, ಆಸ್ತಿ, ಅಹಂಕಾರ ಎನ್ನುವಂಥದ್ದೆಲ್ಲ ಬರುತ್ತದೋ ಅಲ್ಲಿಗೆ ಆ ಸಂಬಂಧವು ಹಳಸಲು ಆರಂಭಿಸಿಬಿಡುತ್ತದೆ. ಇದೇ ಮಹಾಭಾರತದಲ್ಲಿಯೂ ನಡೆದಿದ್ದು. ದಾಯಾದಿ ಮತ್ಸರ ಹುಟ್ಟಿದ್ದು ರಾಜ್ಯಕ್ಕಾಗಿ ಆ ರಾಜ್ಯ ಪಡೆಯಲು ನ್ಯಾಯಯುತವಾದ ಹಕ್ಕು ಪಾಂಡವರಿಗಿದ್ದರೂ ತಮಗಾಗಿಯೇ ಉಳಿಯಲಿ ಎಂದು ಹಠ ಅಲ್ಲಿತ್ತು. ಹಾಗಾಗಿ ಕೌರವರು ಹಲವಾರು ಸವಾಲುಗಳನ್ನು ಪಾಂಡವರತ್ತ ಎಸೆದು ಗೆದ್ದರು. ಪಾಂಡವರು ಸೋತರು. ಆದರೆ ನೂರು ಬಾರಿ ಸೋತರೂ ಕೊನೆಯ ಕುರುಕ್ಷೇತ್ರ ಯುದ್ಧದಲ್ಲಿ ನೂರು ಜನ ಕೌರವರನ್ನು ಅಳಿಸಿ ಜಯ ಗಳಿಸಿದ್ದರು ಪಾಂಡವರು. ನಮ್ಮ ಬದುಕಿನಲ್ಲಿಯೂ ಸಾಕಷ್ಟು ಸೋಲು ನಮಗಿದೆ. ಆದರೆ ಆ ಸೋಲಿಗೆ ಭಯ ಪಡದೆ ನಡೆಯುತ್ತಿದ್ದರೆ ಒಂದಲ್ಲ ಒಂದು ದಿನ ಜಯ ನಮಗೂ ಸಿಗುವುದು ಎನ್ನುವುದಕ್ಕೆ ಸಾಕ್ಷ್ಯ ನಮ್ಮ ಪುರಾಣದಲ್ಲಿ ಸಿಗುತ್ತದೆ.
- * * * -