ಬಾಗಲಕೋಟೆ, ಡಿ. 14 ವಲಸೆ
ಬಂದಿರುವ ಎಲ್ಲಾ ಶಾಸಕರಿಗೂ ಸಚಿವ ಸ್ಥಾನದ ಹಂಚಿಕೆ ವಿಚಾರ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಉಪಮುಖ್ಯಮಂತ್ರಿ
ಗೋವಿಂದ ಕಾರಜೋಳ ತಿಳಿಸಿದ್ದಾರೆ. ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ,
ಬಿ. ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದು
ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಜಾರಿಕೊಂಡರು.ಸಚಿವ ಸಂಪುಟ ಸಭೆಗೆ ಬಿ. ಶ್ರೀರಾಮುಲು ಅನುಮತಿ ಪಡೆದು
ಗೈರಾಗಿದ್ದಾರೆ. ಆ ವಿಚಾರದ ಕುರಿತು ಅಪಾರ್ಥ ಕಲ್ಪಿಸಬೇಕಿಲ್ಲ.ರಾಮುಲು ಅವರು ಮುನಿಸಿಕೊಂಡಿಲ್ಲ
ಎಂದು ಅವರು ಸ್ಪಷ್ಟಪಡಿಸಿದರು.ನಾನು ಚುನಾವಣಾ ಪೂರ್ವದಲ್ಲಿ
ಅನೇಕ ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೂರುವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಕಾಂಗ್ರೆಸ್, ಜೆಡಿಎಸ್
ನವರು ಯಾವುದೇ ಕುತಂತ್ರ ಮಾಡಿದರೂ ಅವರಿಗೆ ಜಯ ಸಿಗುವುದಿಲ್ಲ
ಎಂದು ಹೇಳಿದ್ದೆ ಎಂದ ಅವರು, ಡಿಸೆಂಬರ್ 9 ರ ನಂತರ ಕಾಂಗ್ರೆಸ್, ಜೆ ಡಿಎಸ್ ಕಚೇರಿಗೆ ದೀಪ ಹಚ್ಚುವವರು
ಇರುವುದಿಲ್ಲ ಎಂದಿದ್ದೆ ಎಂದು ಸ್ಮರಿಸಿಕೊಂಡರು. ಪ್ರಸ್ತುತ ನನ್ನ ಮಾತು ನಿಜ ಆಗಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.
ಇನ್ನು ಸ್ವಲ್ಪ ದಿನಗಳ ನಂತರ ಎರಡೂ ಪಕ್ಷಗಳು ಇನ್ನು ಅಧೋಗತಿಗೆ ತಲುಪುತ್ತವೆ ಎಂದು ಅವರು ಹೇಳಿದ ಅವರು, ಇನ್ನು ಸ್ವಲ್ಪ
ದಿನದಲ್ಲಿ ಜೆ ಡಿಎಸ್ ಹಾಗೂ ಕಾಂಗ್ರೆಸ್ ನ ಅನೇಕರು
ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.ರೇಪ್ ಇನ್ ಇಂಡಿಯಾ ಎಂದ ರಾಹುಲ್ ಗಾಂಧಿ ಹೇಳಿಕೆಗೆ
ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರಿಗೆ ಜ್ಞಾನದ ಕೊರತೆ ಇದೆ. ಅವರ ಬಗ್ಗೆ ಚರ್ಚೆ ಮಾಡುವ
ಅವಶ್ಯಕತೆಯಿಲ್ಲ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬ
ಪರಿಜ್ಞಾನವಿಲ್ಲದೆ ಅವರು ಮಾತನಾಡುತ್ತಾರೆ. ಅವರೊಬ್ಬ
ರಾಷ್ಟ್ರೀಯ ಅಧ್ಯಕ್ಷರಾಗಿದ್ದಂತವರು ಎಂದು ತಿರುಗೇಟು
ನೀಡಿದರು. ಲೋಕಸಭಾ ಸದಸ್ಯರು ಯಾವುದೇ ವಿಷಯದ
ಬಗ್ಗೆ ಮಾತನಾಡುವ ವೇಳೆ ನಾಲಿಗೆ ಮೇಲೆ ಹಿಡಿತವಿರಬೇಕು ಎಂಬ ಸಲಹೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡುತ್ತೇನೆ ಎಂದರು.ಜೆ
ಡಿ ಎಸ್ ನಿಂದ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿರುವುದರಿಂದ ಆ ಪಕ್ಷದ ವರಿಷ್ಠ ದೇವೆಗೌಡರು ಆತಂಕಗೊಂಡಿದ್ದಾರೆ
ಎಂಬುದಕ್ಕೆ ಕಾರಜೋಳ ಪ್ರತಿಕ್ರಿಯಿಸಿದ ಅವರು, ನಮ್ಮದು
ರಾಷ್ಟ್ರೀಯ ಪಕ್ಷ ನಿಂತ ನೀರಲ್ಲ ಹರಿಯುವ ನೀರಿನಂತೆ. ಹರಿಯುವ ನೀರಲ್ಲಿ ಹೊಸ ನೀರು ಸೇರುವುದು ಸ್ವಾಭಾವಿಕ. ಎಷ್ಟು ಜನ ಬಿಜೆಪಿ ಸೇರುತ್ತಾರೋ
ಕಾದು ನೋಡಿ ಎಂದರು.ನಿಮ್ಮ ಪುತ್ರನ ಜೊತೆಗೆ ವಿಪಕ್ಷಗಳ
ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ
ಉಪಮುಖ್ಯಮಂತ್ರಿ ಗಳು ಅದರ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಮತ್ತೆ ಆಪರೇಷನ್ ಕಮಲದ ಬಗ್ಗೆ ಸುಳಿವು
ನೀಡಿದರು.