ಯುವ ಜನತೆ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿ

ಲೋಕದರ್ಶನ ವರದಿ

ಶೇಡಬಾಳ 17: ಇಂದಿನ ಯುವಕ-ಯುವತಿಯರು ಆಧುನಿಕ ಜಗತ್ತಿಗೆ ಮಾರು ಹೋಗಿ ಮೋಜು ಮಸ್ತಿಗಾಗಿ ಮೊಬೈಲ್, ಸಿಗರೇಟ್, ಗಾಂಜಾ, ಮದ್ಯ, ಮಾಂಸ ಸೇವನೆಗಳಿಂದ ದುಷ್ಚಟಗಳಿಗೆ ಬಲಿಯಾಗಿರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಮಿರಜದ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ವೈದ್ಯ ಡಾ. ದೀಪಕ ಮುಕಾದಮ್ ಹೇಳಿದರು. 

ಅವರು ಸೋಮವಾರ ದಿ. 16 ರಂದು ಸಮೀಪದ ಡಾಲೆವಾಡಿ ಗ್ರಾಮದಲ್ಲಿ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಚಂದ್ರಶೇಖರ ಹಳಿಂಗಳಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಸಾಕ್ಷರ ಗ್ರಾಮ ಮತ್ತು ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಜರುಗಿದ ಶಿಬಿರದಲ್ಲಿ ಮಾತನಾಡುತ್ತಿದ್ದರು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬ ಯುವಕ ಯುವತಿಯರು ಮಾನಸಿಕ ಹಾಗೂ ಶಾರೀರಿಕ ಒತ್ತಡದಿಂದ ಬಳಲುವಂತಾಗಿದೆ. ಮಾನಸಿಕ ನೆಮ್ಮದಿಗಾಗಿ ಹಲವಾರು ದುಷ್ಚಟಗಳಿಗೆ ದಾಸರಾಗಿ ನೆಮ್ಮದಿಗಾಗಿ ಪ್ರಯತ್ನ ಪಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಮೋಜು ಮಸ್ತಿಗಾಗಿ ಪ್ರಾರಂಭ ಮಾಡಿದ ಈ ದುಷ್ಚಟಗಳಿಗೆ ಅವರು ದಾಸರಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಖೇಧಕರ ಸಂಗತಿಯಾಗಿದೆ. ಕಾರಣ ಈ ಯುವಕರನ್ನು ಸನ್ಮಾರ್ಗದತ್ತ ಕೊಂಡ್ಯೋಯುವ ಕೆಲಸವನ್ನು ಸಾಮಾಜಿಕ ಸಂಘ ಸಂಸ್ಥೆಗಳು ಮಾಡಬೇಕಾಗಿರುವುದು ಅತ್ಯವಶ್ಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಿರಜದ ಹಳಿಂಗಳಿ ಫೌಂಡೇಶನ ಹಾಗೂ ನಿರ್ಮಲ ವ್ಯಸನಮುಕ್ತಿ ಕೇಂದ್ರವು ತನ್ನದೇ ಆದ ರೀತಿಯಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ವ್ಯಸನ ಮುಕ್ತಿ ಕೇಂದ್ರದ ಸಾಗರ ಜಾಧವ, ವಿನಾಯಕ ಕವಡೆ, ವೈಭವ ವಾಲಿಕರ, ಸ್ವರೂಪ ರಾಯನಾಡೆ, ಮಾಯಾ ಕದಮ, ಮಾಧುರಿ ಪುಕಾಳೆ ಅಭಿಯನದ ದುಷ್ಚಟಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ನಾಟಕವನ್ನು ಅಭಿನಯಿಸಿ ಶಾಲಾ ಮಕ್ಕಳನ್ನು ರಂಜಿಸಿದರು. 

ಡಾಲೆವಾಡಿ ಗ್ರಾಪಂ ಅಧ್ಯಕ್ಷ ರಾಮದಾಸ ಸಾಳುಂಕೆ, ಉಪಾಧ್ಯಕ್ಷ ಪ್ರಶಾಂತ ಅಟವಲೆ, ಹಿಮ್ಮತ ಸಾಳುಂಕೆ, ನಾನಾಸಾಹೇಬ ಕಾರಂಡೆ, ಬಹುಸಾಹೇಬ ಪಾಟೀಲ, ಜಿತೇಂದ್ರ ಅಟವಲೆ, ಮುಖ್ಯಾಧ್ಯಾಪಕ ದೀಲಿಪ ವಾಘಮಾರೆ, ತಾನಾಜಿ ಕೊಡಗೆ, ಅಂಗನವಾಡಿ ಕಾರ್ಯಕರ್ತೆ ರೇಖಾ ಸಾಳುಂಕೆ, ಸುಷ್ಮಾ ಕಾರಂಡೆ, ಸವಿತಾ ಸಾಳುಂಕೆ, ರವೀಂದ್ರ ಅಟವಲೆ ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.