ಕಲಬುರಗಿ, ಡಿ. 20 ಪೌರತ್ವ ಕಾಯ್ದೆ ಕುರಿತು ಜನತೆಯ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದ ಐವಾನ್-ಎ- ಶಾಹಿಯಲ್ಲಿ ಸುದ್ದಿಗಾರರೊಂದಿಗರ ಮಾತನಾಡಿದ ಅವರು,
ಪೌರತ್ವ ಕಾಯ್ದೆ ನರೆ ರಾಷ್ಟ್ರಗಳಿಂದ ಬಂದ ಅಲ್ಲಿನ
ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ. ಆದರೆ, ಸತ್ಯ ಸಂಗತಿ ತಿಳಿದಿದ್ದರೂ, ವಿದ್ಯಾವಂತರೆನಿಸಿಕೊಂಡವರೇ
ಜನತೆಯ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ ಎಂದು ಅವರು ಕಿಡಿಕಾರಿದರು. ಜನತೆಯನ್ನು ತಪ್ಪು ದಾರಿಗೆಳೆಯುವುದೂ
ದೇಶದ್ರೋಹದ ಕೆಲಸ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯುವಕರ ವಿರೋಧಿ ಎನ್ನುವ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಪೌರತ್ವ ಕಾಯ್ದೆಯ ಸದುದ್ದೇಶ
ಗೊತ್ತಿದ್ದರೂ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಆಡಳಿದ ಬಗ್ಗೆ ವಿರೋಧ ಪಕ್ಷಗಳಿಗೆ ಹೇಳಲು ಏನು ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು
ಈ ರೀತಿಯಾಗಿ ಹೇಳಿರಬೇಕು ಎಂದರು. ಮಾಜಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಉಪಚುನಾವಣೆ ನಂತರ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಳಾಸವೂ ಇರಲಿಲ್ಲ. ಈಗ ಮಾತಾಡುತ್ತಿದ್ದಾರೆ. ಇದಕ್ಕೆ ನಮ್ಮ ನಾಯಕರು ತಕ್ಕ ಉತ್ತರ
ನೀಡುತ್ತಾರೆ ಎಂದರು.