ನೀನು ತಪ್ಪು ಮಾಡುತ್ತೀಯಾ ಎಂದು ತೋರಿಸುವಾಗ ತೋರು ಬೆರಳು ಮಾತ್ರ ಅವನತ್ತ ಇರುತ್ತದೆ. ಹೆಬ್ಬೆರಳು ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಆಕಾಶದತ್ತ ಮುಖ ಮಾಡಿ ನಿಲ್ಲುತ್ತದೆ. ಆದರೆ ಉಳಿದ ಮೂರು ಬೆರಳುಗಳು ನಮ್ಮತ್ತಲೇ ನೋಡುತ್ತದೆ ಎನ್ನುವುದು ವಾಸ್ತವ. ಇದನ್ನು ನಮಗೆ ಚಿಕ್ಕವರಿದ್ದಾಗಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ನಾವು ಕೇಳುತ್ತಲೇ ಬಂದಿದ್ದೇವೆ. ಕಾಲಕ್ಕೆ ನಾವು ಮತ್ತೆ ಯಾವುದೋ ಒಂದು ತಪ್ಪು ಮಾಡುತ್ತೇವೆ. ಸರಿಪಡಿಸಿಕೊಂಡು ಮತ್ತೆ ಮುಂದುವರೆಯುತ್ತೆವೆ. ಎಲ್ಲ ಗುಣಗಳಂತೆ ನಮ್ಮಿಂದ ತಪ್ಪು ಆಗುವುದು ಕೂಡ ಒಂದು ಗುಣದಲ್ಲಿಯೇ ಬರುತ್ತದೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು, ಅಥವಾ ಅದಕ್ಕೆ ಕ್ಷಮೆ ಕೇಳುವುದು, ಅಥವಾ ತಪ್ಪನ್ನು ಒಪ್ಪಿಕೊಳ್ಳದೇ ಹೋಗುವುದು ಇದೆಲ್ಲ ನಂತರದಲ್ಲಿ ನಡೆಯುವ ಪ್ರತಿಕ್ರಿಯೆ.
ತಪ್ಪು ಮಾಡದಿದ್ದರೆ ಮನುಷ್ಯನಿಗೆ ಕೆಲವು ವಿಷಯಗಳು ಅರಿವಿಗೆ ಬರುವುದು ಕಷ್ಟ. ಎಡವಿದರೆ ಮಾತ್ರ ಮುಂದೆ ನಡೆಯುವಾಗ ಜಾಗ್ರತೆಯಿಂದ ನಡೆಯುತ್ತಾನೆ ಅನ್ನುತ್ತಾರಲ್ಲ ಹಾಗೆಯೇ ಇದು ಕೂಡ. ನಮ್ಮ ನಡೆ ನುಡಿಯಲ್ಲಿ ತಪ್ಪಾಗದಂತೆ ಎಚ್ಚರಿಕೆ ವಹಿಸುತ್ತಾ, ಆದ ತಪ್ಪಲ್ಲಿ ತಿದ್ದಿಕೊಳ್ಳುತ್ತ ಇದ್ದರೂ ಕೆಲವು ಬಾರಿ ನಮ್ಮ ತಪ್ಪು ನಮ್ಮ ಅರಿವಿಗೆ ಬರುವಷ್ಟರಲ್ಲಿ ಅನಾಹುತವೊಂದು ಜರುಗಿ ಹೋಗಿರುವ ಸಂಭವ ಇರುತ್ತದೆ. ಆಗ ನಾವು ಸರಿಮಾಡಲಾರದ ತಪ್ಪನ್ನು ಕೊನೆಯ ಪಕ್ಷ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಿ ನಮ್ಮ ಗೌರವವನ್ನು ಉಳಿಸಿಕೊಳ್ಳಬಹುದು.
ಕಾರ್ತಿಕ್ ಸೂರ್ಯ ಅಂತ ನನ್ನ ಸ್ನೇಹಿತರೊಬ್ಬರು ನಿತ್ಯ ಒಂದೊಂದು ನುಡಿ ಮುತ್ತನ್ನು ಬರೆದು ಕಳಿಸುತ್ತಾರೆ. ಹಲವಾರು ವಿಚಾರಗಳು ಅವರು ಕಳಿಸಿದ ಮೇಲೆ ಹೌದಲ್ಲವಾ ಎನ್ನಿಸುವುದು ಉಂಟು. ಹಾಗೆ ನಾಲ್ಕು ದಿನ ಹಿಂದೆ ಒಂದು ಚೆಂದದ ನುಡಿಯನ್ನು ಕಳಿಸಿದ್ದರು ಅದು “ಇತರರ ತಪ್ಪಿನಿಂದಲೂ ಸ್ವಲ್ಪ ಕಲಿತುಕೊಳ್ಳೋಣ. ಎಲ್ಲಾ ತಪ್ಪುಗಳನ್ನು ನಾವೇ ಮಾಡುವಷ್ಟು ಜೀವನದ ಆಯಸ್ಸು ನಮಗಿಲ್ಲ” ಅಂತ. ಎರಡೇ ಎರಡು ಸಾಲಿನಲ್ಲಿ ಅದೆಷ್ಟು ಅರ್ಥವನ್ನು ನಾವು ಕಂಡುಕೊಳ್ಳಬಹುದು ಅಲ್ಲವೆ. ನಾವು ಮಾಡಿದರೆ ತಪ್ಪು, ಇನ್ನೊಬ್ಬರು ಮಾಡಿದರೆ ಅದು ತಪ್ಪು ಮಾತ್ರವಲ್ಲ ಆತ ನಿಷ್ಪ್ರಯೋಜಕ, ಸಮಾಜಕ್ಕೆ ಮಾರಕ, ತನ್ನ ಸುತ್ತಲಿನವರಿಗೆ ಕೆಟ್ಟ ಹೆಸರು ತರುವ ಕೊಳಕ ಹೀಗೆ ಏನೇನೋ ಮಾತನಾಡಿ ಅವನ ಬಗ್ಗೆ ಇಲ್ಲಸಲ್ಲದ್ದು ಸೇರಿಸಿ ಕೊಂಕಾಡುತ್ತೇವೆ. ಈ ರೀತಿ ಆ ವ್ಯಕ್ತಿಯ ಬಗ್ಗೆ ಮಾತನಾಡುತ್ತೆವೇ ಹೊರತು ನಾವು ತಪ್ಪು ಮಾಡುತ್ತಿದ್ದೇವೆ ಎಂದು ಮಾತ್ರ ಯೋಚಿಸಲು ಹೋಗುವುದಿಲ್ಲ. ಅವನು ಮಾಡಿದ ಆ ತಪ್ಪನ್ನು ನಾವು ಮಾಡಬಾರದು ಎಂದು ಕೂಡ ಯೋಚಿಸುವುದಿಲ್ಲ. ಆ ತಪ್ಪಿನಿಂದ ಏನೆಲ್ಲ ನಷ್ಟವಾಗಿದೆ. ಇದು ಅವನಿಂದ ಆಗಲಿ ನಮ್ಮಿಂದ ಆಗಲಿ ಮತ್ತೆ ಆಗದಂತೆ ತಡೆಯುವುದು ಹೇಗೆ ಈ ರೀತಿಯಾದ ಚಿಂತನೆಯೂ ನಡೆಯುವುದಿಲ್ಲ. ಅವರ ಜೊತೆ ನಾವು ಅದೇ ತಪ್ಪಿನ ಹಾದಿಯಲ್ಲಿ ನಿಂತಿರುತ್ತೇವೆ. ಹೀಗೆ ನಾವೇ ಯಾವತ್ತು ತಪ್ಪು ಮಾಡುವ ಬದಲು ಬೇರೆಯವರು ಮಾಡಿದ ತಪ್ಪಿನಿಂದ ನಾವೊಂದಿಷ್ಟು ಕಲಿತುಕೊಳ್ಳುವುದಾದರೆ ಅದೆಷ್ಟು ಚೆಂದ ಅಲ್ಲವಾ.
ಒಂದು ಮನೆಯಲ್ಲಿ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಟಿವಿ ನೋಡುತ್ತ ಕುಳಿತಿದ್ದ ಯಜಮಾನ. ವಾರ್ತೆಯಲ್ಲಿ ಬೈಕ್ ಕಳ್ಳತನ ಮಾಡಿದ ವ್ಯಕ್ತಿ ಪೋಲಿಸರ ವಶಕ್ಕೆ ಎನ್ನುವ ವಾರ್ತೆ ಪ್ರಸಾರ ಆಗುತಿತ್ತು. ಪಕ್ಕದಲ್ಲಿ ಕುಳಿತ ಹೆಂಡತಿಗೆ ಹೇಳಿದ. ನೋಡು ಹೆತ್ತವರು ಗಮನ ಕೊಡಬೇಕು. ಮಕ್ಕಳು ಏನು ಮಾಡಿದರೂ ಲಕ್ಷ್ಯವಿಡದೇ ತಮ್ಮ ಪಾಡಿಗೆ ತಾವಿದ್ದರೆ ಹೀಗೆ ಮಕ್ಕಳು ಅಡ್ಡ ದಾರಿ ಹಿಡಿದು ತಪ್ಪು ಮಾಡುತ್ತಾರೆ ಎನ್ನುತ್ತಿದ್ದ. ಆಗಲೆ ಅವನ ಪೋನ್ ರಿಂಗಾಗಿತ್ತು. ಪೋಲೀಸ್ ಸ್ಟೇಷನ್‌ನಿಂದ. ‘ಸರ್ ನಿಮ್ಮ ಮಗ ಕುಡಿದು ವಾಹನ ಚಲಾಯಿಸುತ್ತಿದ್ದ. ಲೈಸನ್ಸ್ ಬೇರೆ ಇಲ್ಲ. ನೀವು ಬಂದು ದಂಡ ಕಟ್ಟಿ ಬಿಡಿಸಿಕೊಂಡುಹೋಗಿ’ ಎಂದು.
ಅಕ್ಕ ಪಕ್ಕದ ಮನೆಯ ಹೈಸ್ಕೂಲ್ ಹೋಗುವ ಮಕ್ಕಳಿಬ್ಬರು ಪರೀಕ್ಷೆ ಬರೆದರು. ಒಬ್ಬಾಕೆಗೆ ಕಡಿಮೆ ಅಂಕ ಬಿದ್ದಿತ್ತು. ಮತ್ತೊಬ್ಬಳು ಉತ್ತಮ ಅಂಕ ಗಳಿಸಿದ್ದಳು. ಮಕ್ಕಳ ಕೈಗೆ ಉತ್ತರ ಪತ್ರಿಕೆ ಕೊಟ್ಟು ಪಾಲಕರ ಸಹಿ ತೆಗೆದುಕೊಂಡು ಬರುವಂತೆ ಶಿಕ್ಷಕರು ತಿಳಿಸಿದ್ದರು. ಅದರಂತೆ ಉತ್ತಮ ಅಂಕಗಳಿಸಿಕೊಂಡಿದ್ದ ಹುಡುಗಿ ತಾಯಿಯ ಬಳಿ ಸಹಿ ಹಾಕಿಸಿಕೊಂಡು ಹೋದಳು. ಮತ್ತೊಬ್ಬಳು ತನ್ನ ತಾಯಿಯ ಸಹಿಯನ್ನು ತಾನೇ ಮಾಡಿಕೊಂಡು ಹೋದಳು. ತಪ್ಪು ಮಾಡಿದ್ದ ಹುಡುಗಿ ಶಿಕ್ಷಕರಲ್ಲಿ ಸಿಕ್ಕಿ ಹಾಕಿಕೊಂಡಳು. ಈ ವಿಚಾರ ಎರಡು ಮನೆಯಲ್ಲೂ ತಿಳಿಯಿತು. ತಪ್ಪು ಮಾಡಿದ್ದ ಹುಡುಗಿಯನ್ನು ಈ ಮನೆಯವರು ನಿಕೃಷ್ಟವಾಗಿ ನೋಡಿದ್ದಲ್ಲದೇ ತಮ್ಮ ಮಗಳನ್ನು ಅವಳೊಟ್ಟಿಗೆ ಹೋಗಲು ಬಿಡಲಿಲ್ಲ. ನೀನು ಅವಳಂತೆ ಆದರೆ ಹೇಗೆ? ಸಹವಾಸ ದೋಷ. ನೀನು ಚೆನ್ನಾಗಿ ಓದಿಕೋ ಎನ್ನುವ ಒತ್ತಡ ಹಾಕಿದರು. ಆದರೆ ಮತ್ತೊಂದು ಮಗುವಿನ ತಪ್ಪು ಹೇಳುವ ಭರಾಟೆಯಲ್ಲಿ ತನ್ನ ಮಗುವಿಗೆ ಒತ್ತಡ ಹಾಕಿ ತಪ್ಪು ಮಾಡುತ್ತಿದ್ದೇವೆ ಎನ್ನುವುದು ಮರೆತು ಹೋಗಿತ್ತು. ಕೆಲವು ತಿಂಗಳ ನಂತರ ಮಕ್ಕಳು ಮತ್ತೆ ಪರೀಕ್ಷೆ ಬರೆದರು. ಈ ಬಾರಿ ಕಡಿಮೆ ಅಂಕ ಪಡೆದವಳು ಹೆಚ್ಚಿನ ಅಂಕ ಪಡೆದು ಪಾಸಾಗಿದ್ದಳು. ಮತ್ತೊಬ್ಬಳಿಗೆ ಅಂಕ ಕಡಿಮೆ ಬಿದ್ದಿದ್ದವು. ಆಕೆ ಯೋಚಿಸಿದಳು. ತಾನು ಅಮ್ಮನ ಸಹಿಯನ್ನು ಹಾಕಿದರೆ ತನ್ನ ಸ್ನೇಹಿತೆಗೆ ಆದಂತೆ ಅವಮಾನ ಆಗುತ್ತದೆ. ಯಾರಿಗೂ ತಿಳಿಯುವುದಿಲ್ಲ. ಒಂದು ಸೊನ್ನೆಯನ್ನು ಹಾಕಿಬಿಟ್ಟರೆ ದೊಡ್ಡ ಅಂಕ ಸಿಗುತ್ತದೆ ಎಂದು ಆಕೆ ಉಪಾಯ ಮಾಡಿದಳು. ಆದರೆ ಅದು ಸಹ ಗುಟ್ಟಾಗಿ ಉಳಿಯಲಿಲ್ಲ. ಶಿಕ್ಷಕರು ಆ ತಪ್ಪನ್ನು ಪಾಲಕರಿಗೆ ತಿಳಿಸಿದರು.
ಚಿಕ್ಕಚಿಕ್ಕ ತಪ್ಪುಗಳು ಆದರೆ ಮಾನಸಿಕವಾಗಿ ಅದೆಷ್ಟು ಆಘಾತವನ್ನು ಕೊಡುತ್ತವೆ. ತಪ್ಪು ನಡೆಯುವುದು ದೊಡ್ಡ ವಿಚಾರವಲ್ಲ. ಅದನ್ನು ೆ ಮುಂದವರೆಸಿಕೊಂಡು ಹೋಗಲು ನಾವೇ ಹೇಗೆ ಅವಕಾಶ ಮಾಡಿಕೊಟ್ಟು ಬಿಡುತ್ತೇವೆ ಎನ್ನುವದು ದೊಡ್ಡ ಸಂಗತಿ. ಇನ್ನೊಬ್ಬ ಹುಡುಗ ಕಳು ಮಾಡಿದಾಗ ತಂದೆ ತಾಯಿ ಸಂಸ್ಕಾರವೇ ಸರಿ ಇಲ್ಲ ಎನ್ನುವ ಯಜಮಾನ ಈ ಸಮಯದಲ್ಲಿ ತನ್ನ ಮಗ ಏನು ಮಾಡುತ್ತಿರಬಹುದು ಎಂದು ಯೋಚಿಸಲೇ ಇಲ್ಲ. ಪಕ್ಕದ ಮನೆಯ ಹುಡುಗಿ ತಾಯಿಯ ಸಹಿ ಹಾಕಿದಳು ಎನ್ನುವ ಮಗಳ ಮನದಲ್ಲಿ ತಾವು ಏನು ಬಿತ್ತುತ್ತಿದ್ದೇವೆ ಎನ್ನುವತ್ತ ಗಮನಿಸಲೇ ಇಲ್ಲ. ಇದಕ್ಕಾಗಿಯೇ ತಪ್ಪು ಮಾಡುವುದು ದೊಡ್ಡ ವಿಚಾರವಲ್ಲ. ಅದನ್ನು ಅಲ್ಲಿಯೇ ತಿಳಿಸಿ ಹೇಳಿ, ಆದ ತಪ್ಪು ಮರೆಯುವಂತೆ ನೋಡಿಕೊಂಡು ಉತ್ತಮ ದಾರಿಯತ್ತ ನಡೆಸುವುದು ಬಹಳ ಮುಖ್ಯ. ತಪ್ಪು ನಾವು ಮಾಡಿಯೇ ಬುದ್ಧಿ ಕಲಿಯಬೇಕೆಂದೇನು ಇಲ್ಲ. ಬೇರೆಯವರು ಮಾಡಿದ ತಪ್ಪಿನಿಂದಲೂ ನಾವು ಎಚ್ಚೆತ್ತುಕೊಳ್ಳಬಹುದು. ಒಂದು ತಪ್ಪು ನೂರು ಪಾಠ ಕಲಿಸುತ್ತದೆ. ಆ ಪಾಠದಿಂದ ನೂರು ಮೆಟ್ಟಿಲು ಹತ್ತುವ ಅವಕಾಶ ಇರುತ್ತದೆ. ತಪ್ಪು ಮಾಡುವುದು ತಪ್ಪೇನಲ್ಲ. ಅದರಲ್ಲೂ ಮಕ್ಕಳು ತಪ್ಪು ಮಾಡಲು ಒಂದಿಷ್ಟು ಜಾಗ ಬಿಟ್ಟು ಬಿಡಿ. ಆದರೆ ಮತ್ತೆ ಮರುಕಳಿಸಿದರೆ ಮಾತ್ರ ಎಚ್ಚರಿಸಿ. ಇದರಿಂದ ದೊಡ್ಡವರಾದ ಮೇಲೆ ತಾವೇ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಗುರುತಿಸುವುದು ಕಲಿತುಕೊಳ್ಳುತ್ತಾರೆ.
- * * * -