ಲೋಕದರ್ಶನ ವರದಿ
ಶಿರಹಟ್ಟಿ 06: ನಮ್ಮ ದೇಶ ಸುಸಂಸ್ಕೃತಿಯಿಂದ ಕೂಡಿದ ದೇಶ, ಪ್ರತಿಯೊಂದು ಕುಟುಂದ ಹಾಗೂ ಪ್ರತೀ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಾಹಿತ್ಯದ ಅರಿವು ಮೂಡಿಸುವುದರಿಂದ ಮಕ್ಕಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಅತ್ಯಂತ ಮುಖ್ಯವಾದ ಅನುಕೂಲವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ ಸಾಲಿಮಠ ನುಡಿದರು.
ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಸ್ಜೆಎಫ್ಸಿ ಪ್ರೌಢಶಾಲೆಯಲ್ಲಿ ನಡೆದ ಶಾಲೆಗಳಲ್ಲಿ ಸಾಹಿತ್ಯದ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತು ಹತ್ತಾರು ಕ್ಷೇತ್ರಗಳಲ್ಲಿ ವಿನೂತನವಾಗಿ ಕಾರ್ಯ ಮಾಡುತ್ತಾ ಬರುವ ಮೂಲಕ ಕನ್ನಡ ನಾಡು, ನುಡಿ, ಜಲದ ರಕ್ಷಣೆಗಾಗಿ ಶ್ರಮಿಸುತ್ತಿದ್ದು, ಈ ಕನ್ನಡ ಭಾಷೆಯ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎಂ.ಕೆ ಲಮಾಣಿ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಂಬರುವ ಭವಿಷತ್ತಿನಲ್ಲಿ ಉತ್ತಮ ಭವಿಷ್ಯವನ್ನು ಹೊಂದಬೇಕು, ತಾವೆಲ್ಲರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಶಾಲೆಗೆ, ಕುಟುಂಬಕ್ಕೆ ಹಾಗೂ ನಿಮ್ಮ ಊರಿಗೆ ಹೆಸರನ್ನು ಬೆಳಗಿಸಿ ಎಂದು ನುಡಿದರು.
ಎಚ್.ಬಿ ಬಿಜ್ಜೂರ, ಎಚ್. ಮಲ್ಲಿಕಾರ್ಜುನರೆಡ್ಡಿ, ಎಸ್.ಎಂ ಹಳ್ಳೆಮ್ಮನವರ, ಎಸ್.ಬಿ ಮಳಲಿ, ಆರ್.ಜಿ ಹಳ್ಳೀಕೇರಿ, ಎಸ್.ಎಂ ತಳಗಿನಮನಿ, ಡಿ.ಎಸ್ ಬೂದನಗೌಡರ, ಆರ್.ಎಚ್ ಬಳಬಟ್ಟಿ, ಎಂ.ಎಸ್ ಸವಡಿ, ವಿ.ಎಸ್ ಪವಾರ, ಎಂ.ಏ ಮಕಾನದಾರ ಇನ್ನೂ ಅನೇಕರು ಉಪಸ್ಥಿತರಿದ್ದರು.