ಅರ್ಹ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್‌ ವಿತರಿಸಿ: ಮುದ್ರಣ ಮಾಧ್ಯಮ ಸಂಘದ ಪುನಃ ಮನವಿ

ಅರ್ಹ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್‌ ವಿತರಿಸಿ: ಮುದ್ರಣ ಮಾಧ್ಯಮ ಸಂಘದ ಪುನಃ ಮನವಿ  Issue health insurance cards to eligible journalists: Print Media Association reiterates request

ಬೆಳಗಾವಿ, ಆ. 4: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈಜವಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಪತ್ರಕರ್ತರಿಗೆ ಮಾತ್ರ ಆರೋಗ್ಯ ವಿಮಾ ಕಾರ್ಡ್‌ ವಿತರಿಸಬೇಕು ಎಂದು ಮುದ್ರಣ ಮಾಧ್ಯಮ ಸಂಘವು ಮತ್ತೊಮ್ಮೆ ಮಹಾನಗರ ಪಾಲಿಕೆ ಆಡಳಿತವನ್ನು ಒತ್ತಾಯಿಸಿದೆ.  

ಈ ಕುರಿತು ಈ ಹಿಂದೆ ಸಲ್ಲಿಸಿದ್ದ ಮನವಿ ಪತ್ರವನ್ನು ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಘ ಮನವಿ ಮಾಡಿದೆ. ಪತ್ರಕರ್ತರು ಸಾರ್ವಜನಿಕರು ಮತ್ತು ಆಡಳಿತದ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ತವ್ಯದ ವೇಳೆ ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ ಆರೋಗ್ಯ ವಿಮಾ ರಕ್ಷಣೆ ಅತ್ಯಗತ್ಯವಾಗಿದೆ ಎಂದು ಸಂಘ ತಿಳಿಸಿದೆ.  

ಮಹಾನಗರ ಪಾಲಿಕೆ ಜಾರಿಗೊಳಿಸುತ್ತಿರುವ ಆರೋಗ್ಯ ವಿಮಾ ಯೋಜನೆಯ ಪ್ರಯೋಜನವು ನೈಜವಾಗಿ ಪತ್ರಿಕೋದ್ಯಮದಲ್ಲಿ ತೊಡಗಿರುವ ಅರ್ಹ ಪತ್ರಕರ್ತರಿಗೆ ಮಾತ್ರ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರೀಶೀಲಿಸಿ, ಅರ್ಹತೆ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.  

ಅಲ್ಲದೆ, ಯಾವುದೇ ಶಿಫಾರಸು, ಒತ್ತಡ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡದೆ, ಸಮರ​‍್ಕ ದಾಖಲೆಗಳು ಮತ್ತು ನಿಗದಿತ ಅರ್ಹತಾ ಮಾನದಂಡಗಳ ಆಧಾರದ ಮೇಲೆಯೇ ಆರೋಗ್ಯ ವಿಮಾ ಕಾರ್ಡ್‌ ವಿತರಿಸಬೇಕು. ಯೋಜನೆಗೆ ಮೀಸಲಾದ ಸಾರ್ವಜನಿಕ ಹಣ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಹಾನಗರ ಪಾಲಿಕೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸಂಘ ಮನವಿಯಲ್ಲಿ ತಿಳಿಸಿದೆ.  

ಈ ಹಿಂದೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ವಿಷಯದ ಗಂಭೀರತೆಯನ್ನು ಮನಗಂಡು, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಮಾತ್ರ ಆರೋಗ್ಯ ವಿಮಾ ಕಾರ್ಡ್‌ ವಿತರಿಸುವಂತೆ ಸಂಘ ಮತ್ತೊಮ್ಮೆ ವಿನಂತಿಸಿದೆ.