ರಾಯಣ್ಣ ಬ್ರಿಗೇಡ್ ಗೆ ಟ್ವೀಟ್ ಮೂಲಕ ಸಮಾಧಾನ ಹೇಳಿದ ಈಶ್ವರಪ್ಪ

ಬೆಂಗಳೂರು, ಆ 27    ಖಾತೆ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೀಡಿರುವ ಎಚ್ಚರಿಕೆ ಬಗ್ಗೆ  ಸಚಿವ ಹಾಗೂ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಟ್ವೀಟ್ ಮುಖಾಂತರ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ 

ಈಗ ನಮ್ಮೆಲ್ಲರ ದೃಷ್ಟಿ ರಾಜ್ಯದ ಅಭಿವೃದ್ಧಿ ಮೇಲೆ ಮಾತ್ರ ಇರಬೇಕು.  ಅತಿವೃಷ್ಟಿ-ಅನಾವೃಷ್ಟಿಯಿಂದ ಬಳಲಿರುವ ಜನರಿಗೆ ಬೆಂಬಲವಾಗಿ ನಿಲ್ಲಬೇಕು. ಪಕ್ಷದ  ವರಿಷ್ಠರು ನಿರ್ಧರಿಸಿ ಯೋಜಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ಕಾರ್ಯ  ತತ್ಪರರಾಗಬೇಕೇ ವಿನಃ ಯಾವುದೇ ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬಾರದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಖಾತೆ ಹಂಚಿಕೆಯ ವಿರುದ್ಧ ಆರ್.ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ.ರವಿ, ವಿ.ಸೋಮಣ್ಣ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದೇ ಇದ್ದರೂ ಅವರ ಬೆನ್ನಲುಬಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಚ್ಚರಿಕೆ ರವಾನಿಸಿದೆ.  

ಇಂಧನ ಖಾತೆ ಕೇಳಿದ್ದ ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ  ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಬ್ರಿಗೇಡ್ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದೆ. ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು.  ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು  ಎಚ್ಚರಿಕೆ ನೀಡಿತ್ತು. ಹೀಗಾಗಿ ಈಶ್ವರಪ್ಪ ಟ್ವೀಟ್ ಮಾಡಿ  ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. 

ಮತ್ತೊಂದು ಕಡೆ  ಈಶ್ವರಪ್ಪ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ನಿಮಿತ್ತ ಮಾತ್ರಕ್ಕೆ ಹಾಜರಾಗಿ ತಕ್ಷಣವೇ ನಿರ್ಗಮಿಸುವ ಮೂಲಕ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ತೋರಿಸಿಕೊಂಡಿದ್ದಾರೆ.