ಮಹಾಕುಂಭಮೇಳದ ಅಂಗವಾಗಿ ಜರುಗಿದ ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾನುಷ್ಠಾನ

Ishtalinga Mahapujanustha of Kashi Jagadguru held as part of Mahakumbah Mela

 ಮಹಾಕುಂಭಮೇಳದ ಅಂಗವಾಗಿ ಜರುಗಿದ ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾನುಷ್ಠಾನ  

ಧಾರವಾಡ 27  : ದೇವಭೂಮಿ ಭಾರತದ ಘನತೆಯನ್ನು ಎತ್ತಿಹಿಡಿದ ಮಹಾಕುಂಭಮೇಳದಲ್ಲಿ ಎಲ್ಲ ಎಲ್ಲೆಗಳ ದ್ವಂದ್ವ-ವೈರುಧ್ಯಗಳನ್ನು ಮೀರಿ ನಡೆದ ಮುಕ್ತಮನದ ಪುಣ್ಯಸ್ನಾನದಿಂದಾಗಿ ಪ್ರಯಾಗರಾಜ ತ್ರಿವೇಣಿಸಂಗಮವು ಸಕಲಜೀವಾತ್ಮರ ಭಾವಸಂಗಮಕ್ಕೆ ಸಾಕ್ಷಿ ನುಡಿಯುತ್ತದೆ ಎಂದು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.  

ಪ್ರಯಾಗರಾಜ್‌ನಲ್ಲಿರುವ ತಮ್ಮ ಪೀಠದ ಶಾಖಾ ಜಂಗಮ ವಾಡಿ ಮಠದಲ್ಲಿ ಕುಂಭಮೇಳದ ಅಂಗವಾಗಿ ಹಮ್ಮಿಕೊಂಡಿದ್ದ ತಮ್ಮ 41 ದಿನಗಳ ಇಷ್ಟಲಿಂಗ ಮಹಾಪೂಜಾನುಷ್ಠಾನದ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಅಖಂಡ ವಿಶ್ವದ ಗಮನ ಸೆಳೆದಿರುವ ಮಹಾಕುಂಭಮೇಳವು  ಜನಮನದಲ್ಲಿ ಸಹನೆ ಸಹಬಾಳ್ವೆ ಸಾಮರಸ್ಯ ಮತ್ತು ಸಮನ್ವಯ ಗುಣಗಳನ್ನು ಹುಟ್ಟುಹಾಕಿದೆ. ಪವಿತ್ರ ನದಿಗಳಾದ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರದ ಶಕ್ತಿ ಸಂಚಯವು ಸರ್ವರನ್ನೂ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದೂ ಅವರು ಹೇಳಿದರು.  

ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಧರ್ಮ ಸಂದೇಶ ನೀಡಿ ಭಾರತದ ಉದ್ದಗಲಕ್ಕೂ ಇರುವ ವಿವಿಧ ಪ್ರಾಂತ ಪ್ರದೇಶ ಭಾಷೆ ಜಾತಿ ಜನಾಂಗದ ಜನರನ್ನು ಯಾವ ಸಂಘರ್ಷಕ್ಕೂ ಅವಕಾಶ ನೀಡದೇ ಒಂದಾಗಿಸಿರುವ ಉ.ಪ್ರ. ಪ್ರಯಾಗರಾಜ ಮಹಾಕುಂಭಮೇಳದ ಸಾರ್ಥಕ ನೆನಪನ್ನು ತಮ್ಮ ಜೀವನ ವಿಧಾನದಲ್ಲಿ ಶಾಶ್ವತವಾಗಿ ಇಟ್ಟುಕೊಂಡಾಗ  ಸರ್ವರೂ ಭಾವೈಕ್ಯದ ಬದುಕನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.  

ಮಹಾರಾಷ್ಟ್ರದ ಬಾರ್ಸಿ ದಹಿವಡಕರಮಠದ ಶ್ರೀಮಣಿಕಂಠ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ನಂತರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕಾಶಿ ಪೀಠಕ್ಕೆ ತೆರಳಿ ಶ್ರೀಜಗದ್ಗುರು ವಿಶ್ವಾರಾಧ್ಯ ಲಿಂಗೋಧ್ಭವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ 41 ದಿನಗಳ ಇಷ್ಟಲಿಂಗ ಮಹಾಪೂಜೆಯಲ್ಲಿ ರಶಿಯಾ ದೇಶವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಅಸಂಖ್ಯ ಭಕ್ತರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದರು.