ಮೌಂಟ್‌ಮೊಂಗಾನುಯಿ, ಫೆ 10, ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಾಳೆ ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಹಿರಿಯ ಸ್ಪಿನ್ನರ್ ಇಶ್ ಸೋಧಿ ಹಾಗೂ ಬ್ಲೈರ್ ಟಿಕ್ನರ್ ನ್ಯೂಜಿಲೆಂಡ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಕ್ರೈಸ್ಟ್ ಚರ್ಚ್‌ನಲ್ಲಿ ಭಾರತ ಎ ವಿರುದ್ಧ ನಡೆಯುತ್ತಿರುವ ಎರಡನೇ ಅನಧೀಕೃತ ಟೆಸ್ಟ್ ಪಂದ್ಯದಲ್ಲಿ ಸದ್ಯ ಸೋಧಿ ಹಾಗೂ ಟಿಕ್ನರ್ ನ್ಯೂಜಿಲೆಂಡ್ ಎ ಪರ ಆಡುತ್ತಿದ್ದಾರೆ. ಇಂದು ಪಂದ್ಯದ ಕೊನೆಯ ದಿನವಾಗಿದ್ದು, ನಾಳೆ ಅಷ್ಟರೊಳಗೆ ಇವರಿಬ್ಬರು ತಂಡ ಸೇರಿಕೊಳ್ಳಲಿದ್ದಾರೆ.
ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಅವರು ಗ್ಯಾಸ್ಟ್ರೋದಿಂದ ಬಳಲುತ್ತಿದ್ದಾರೆ ಹಾಗೂ ಸ್ಕಾಟ್ ಕುಗ್ಲೇಯಿನ್ ಅವರು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂವರು ಆಟಗಾರರು ಅಂತಿಮ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಅನುಮಾನವಾಗಿದೆ. ಮಿಚೆಲ್ ಸ್ಯಾಂಟ್ನರ್ ಹಾಗೂ ಸ್ಕಾಟ್ ಕುಗ್ಲೇಯಿನ್ ಅವರು ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಟಿಮ್ ಸೌಥಿ ಅನಾರೋಗ್ಯದ ನಡುವೆಯೂ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಮಾರಕ ದಾಳಿ ನಡೆಸಿದ್ದರು. ನಾಯಕ ವಿರಾಟ್ ಕೊಹ್ಲಿ ಅವರನ್ನು ಅದ್ಭುತವಾಗಿ ಕ್ಲೀನ್ ಬೌಲ್ಡ್ ಮಾಡಿದ್ದರು.
ಭುಜ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕೇನ್ ವಿಲಿಯಮ್ಸನ್ ಅವರು ಈಗಾಗಲೇ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅವರ ಜತೆ ಇದೀಗ ಇನ್ನಿತರ ಪ್ರಮುಖ ಆಟಗಾರರ ಗೈರು ಮೂರನೇ ಪಂದ್ಯಕ್ಕೆ ಕಿವೀಸ್‌ಗೆ ಕಾಡಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಈಗಾಗಲೇ 2-0 ಸರಣಿಯನ್ನು ವಶ ಪಡಿಸಿಕೊಂಡಿದೆ. ಇದಕ್ಕೂ ಮುನ್ನ ಟಿ-20 ಸರಣಿಯಲ್ಲಿ ಭಾರತ 5-0 ಅಂತರದಲ್ಲಿ ವೈಟ್ ವಾಶ್ ಮಾಡಿಕೊಂಡಿತ್ತು.