ಓ ಮಹಾತ್ಮಾ ನಿನಂದು “ಪಾಪವನ್ನು ದ್ವೇಶಿಸು ಆದರೆ ಪಾಪಿಯನ್ನು ಪ್ರೀತಿಸು” ಎಂದು ಹೇಳಿ ಹೋದೆ. ನಾವು ಸಹ ನಿನ್ನ ಮಾತನ್ನು ಒಪ್ಪಿಕೊಂಡು ಎಲ್ಲವನ್ನು ಸಹಿಸಿಕೊಂಡೆವು. ಆದರೆ ಇಂದು ಈ ಪಾಪಿಗಳನ್ನು ನಾವು ಸಹಿಸಿಕೊಳ್ಳಬೇಕಾ ನೀವೇ ಹೇಳಿ?. ಬಹುಶಃ ನೀನಾಗಿದ್ದರೆ ಅವರನ್ನು ಸಲೀಸಾಗಿ ಕ್ಷಮಿಸಿ ಎದೆಗವಚಿಕೊಂಡು ಬಿಡುತ್ತಿದ್ದೆ. ಆದರೆ ನಾವು ಮಹಾತ್ಮರಲ್ಲ. ಕೇವಲ ನಿನ್ನ ತತ್ವಗಳನ್ನು ನಾಲಿಗೆ ತುದಿಯಲ್ಲಿ ನಲಿದಾಡಿಸಿ, ಚಪ್ಪಾಳೆ ಗಿಟ್ಟಿಸಿಕೊಂಡು, ಪುಗಸೆಟ್ಟೆ ಪೋಸು ಕೊಡುವವರು. ಆದರೂ ನಮ್ಮ ಮಧ್ಯದಲ್ಲೂ ನಿನ್ನ ಮಾತುಗಳನ್ನು, ಆದರ್ಶಗಳನ್ನು ಅತೀ ಪ್ರೀತಿಸುವವರು ಇದ್ದಾರೆ. ಅವರು ಹೇಗೆ ಇದನ್ನು ಸಹಿಸಿಕೊಳ್ಳಬೇಕು ನೀವೇ ಹೇಳಿ? ಅಂದು ನೀನೆನು ಕೈಯಲ್ಲಿ ಬಂದುಕು ಹಿಡಿಯಲ್ಲಿಲ್ಲ. ಬದಲಿಗೆ ಊರುಗೊಲನ್ನು ಹಿಡಿದುಕೊಂಡೆ ಬ್ರಿಟೀಷ ಸಾಮ್ರಾಜ್ಯದ ವಿರುದ್ಧ ಸಮರ ಸಾರಿದೆ. ಯಾರ ಮನಸ್ಸನ್ನು ನೋಯಿಸಬಾರದು ಎನ್ನುವ ನಿಲುವಿನಿಂದ ನೀನೆ ಎಲ್ಲ ನೋವನ್ನು ಸಹಿಸಿಕೊಂಡೆ. ಹೋರಾಟಕ್ಕೆ ಹಿಂಸೆ ಬಳಕೆಯಾಗಬಾರದು ಎನ್ನುವ ಕಾರಣಕ್ಕೆ ನೀನು ಉಪಾವಾಸ ಕುಳಿತು; ನಮಗೆ ಸ್ವಾತಂತ್ರ್ಯದ ಸಿಹಿಯನ್ನು ಉಣಬಿಡಿಸಲು ಹವಣಿಸಿದೆ. ಪ್ರತಿ ಹಂತದಲ್ಲೂ ನೀನೆ ಬಾಗಿದೆ ಹೊರತು ಶತ್ರುಗಳನ್ನು ಸಹ ಕಷ್ಟಕ್ಕೆ ದೂಡಲು ಇಷ್ಟಪಡಲಿಲ್ಲ. ಬಾಪು ಅದೆಂತ ಸಿದ್ಧಾಂತಗಳು ನಿನ್ನವು? ಒಪ್ಪಿಕೊಳ್ಳಲೇ? ತಿರಸ್ಕರಿಸಲೇ? ಒಂದು ಅರ್ಥವಾಗುವುದಿಲ್ಲ. ಸಿದ್ಧಾಂತಗಳೇನೆ ಇರಲಿ ಆದರೂ ನಿನ್ನ ನಡೆ ನನಗೆ ಬಹಳ ಇಷ್ಟ. ಬರಿಮೈ ಪಕೀರನಾಗಿದ್ದುಕೊಂಡು ಗೆಲುವು ಸಾಧಿಸಲು ಹವಣಿಸಿದ ನೀನೆಂದರೆ ನನಗೆ ಬಲು ಪ್ರೀತಿ. ಆದರೆ ನಿನ್ನಂತ ಉಚ್ಚ ಮಟ್ಟದ ವ್ಯಕ್ತಿತ್ವವನ್ನು ಒಪ್ಪಿಕೊಳ್ಳದ ಜನರು ನಮ್ಮಲ್ಲಿದ್ದಾರೆ. ಅಂಥವರು ಮಾಡುತ್ತಿರುವ ಹೇಸಿಗೆಯ ಕಾರ್ಯ ನನ್ನನ್ನು ಇನ್ನಿಲ್ಲದಂತೆ ಕಾಡಿಸುತ್ತಿದೆ. ನೋವುಂಟು ಮಾಡುತ್ತಿದೆ.
ನಿನ್ನ ಜಯಂತಿ ಎಂದರೆ ಕೇವಲ ಸ್ವಾರ್ಥ ಸಾಧಸಿಕೊಳ್ಳುವುದಕ್ಕೆ ಬಳಕೆಯಾಗುತ್ತದೆ, ಒಂದು ದಿನದ ರಜೆ ಸಿಕ್ಕಿತೆಂದು ಮಜಾ ಮಾಡುವುದಕ್ಕೆ ಸೀಮಿತವಾಗುತ್ತಿದೆ ಎನ್ನುವ ಹತಾಶೆ ಮೊದಲಿನಿಂದಲೂ ನನ್ನನ್ನು ಆವರಿಸಿದೆ. ಅದರ ಮಧ್ಯದಲ್ಲಿ ನಿನ್ನನ್ನೇ ಹರಿದು ಹಂಚಿಕೊಳ್ಳಲು ಪಕ್ಷಗಳು ಹವಣಿಸುತ್ತಿರುವುದು ಹಾಗೂ ನಿನ್ನ ಹೆಸರನ್ನೆ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವುದು ನೋಡಿಯೇ ನಾನು ಕೆರಳಿ ಕೆಂಡವಾಗಿದ್ದೆ, ಆದರೆ ಅದರ ನಡುವೆಯೇ ಭಾರತದ ಭವಿಷ್ಯದ ನಿರ್ಮಾತೃಗಳಾಗಬೇಕಿರುವ ಯುವಜನಾಂಗವೇ ನಿನ್ನನ್ನು ಕೀಳುಮಟ್ಟದಲ್ಲಿ ಬಿಂಬಿಸಿ ಮಾತ್ಸರ‌್ಯದ ಆನಂದ ಪಡೆಯುತ್ತಿರುವುದು ನನ್ನ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡುತ್ತಿದೆ. ನಮ್ಮ ನಾಯಕರಿಗೇನೊ ಬುದ್ದಿ ಇಲ್ಲ. ಅದಕ್ಕೆ ನಿನ್ನನ್ನೇ ಬ್ರ್ಯಾಂಡ್ ಮಾಡಿಕೊಳ್ಳುವುದಕ್ಕೆ ಹವಣಿಸುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಕೇವಲ ನೀನು ಹುಟ್ಟಿದ ದಿನ, ನಿನ್ನದೊಂದು ಭಾವಚಿತ್ರ, ಅದಕ್ಕೊಂದು ಹೂಮಾಲೆ, ಇವರ ಮಾತುಗಳನ್ನು ಕೇಳಿಸಿಕೊಂಡು ಚಪ್ಪಾಳೆ ತಟ್ಟಿ ಹೋಗುವ ಲಜ್ಜೆಗೇಡಿ ಜನರು ಮಾತ್ರ. ಅದರ ಹೊರತು ನಿನ್ಯಾವ ಆದರ್ಶಗಳು ಅವರಿಗೆ ಬೇಕಿಲ್ಲ. ಅಕ್ಷರಶಃ ಆದರ್ಶಗಳೆಂದರೇನು ಎನ್ನುವುದೇ ಅವರಿಗೆ ಗೊತ್ತಿಲ್ಲ. ಇಂಥವರಿಗಾಗಿ ನೀನು ಸ್ವಾಂತಂತ್ರ್ಯ ತಂದುಕೊಡಲು ಇಡೀ ಜೀವನವನ್ನೇ ಕಳೆದುಕೊಂಡೆಯಾ ಹತಭಾಗ್ಯದ ಅಜ್ಜಾ ನಾನೇನು ಹೇಳಲಿ ಇದಕ್ಕೆ?
ನಿನ್ನೆ ನಿನ್ನ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ನಿನ್ನನ್ನು ಅವರ್ಪನ ಮನೆಯ ಆಸ್ತಿ ಎನ್ನುವಂತೆ ಬಿಂಬಿಸಿಕೊಂಡು ಪೋಜು ನೀಡಿದವರು ಬಹಳ ಜನರನ್ನು ಕಂಡೆ. ಪರವಾಗಿಲ್ಲ ಅದು ಅವರ ದೃಷ್ಠಿಕೋನ ಮತ್ತು ಅವರು ಕಂಡುಕೊಂಡ ಮಾರ್ಗ. ಆದರೆ ನಿನ್ನ ಜನ್ಮ ದಿನಾಚರಣೆಯನ್ನು ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ತೋರಿಸಿದ್ದರ ವಿರುದ್ಧ ನನ್ನ ಆಕ್ರೋಶವಿದೆ. ಅಂತವರ ವಿರುದ್ಧ ನನ್ನ ಧಿಕ್ಕಾರವಿದೆ. ನೀನು ಯಾವುದನ್ನು ತಿರಸ್ಕರಿಸಿದ್ದೆಯೊ ಅದನ್ನೆ ತೋರಿಸುವ ಹೇಯ ಕಾರ್ಯ ಮಾಡಿದ್ದು ಅವರ ಹೇಸಿಗೆ ತುಂಬಿದ ಮನಸ್ಸಿನ ದರ್ಶನ ಮಾಡಿಸುತ್ತಿದೆ. ನಿನ್ನ ಕೈಯಲ್ಲಿ ಬಂದುಕನ್ನು ನೀಡಿ, ಅನ್ಯ ಸ್ತ್ರೀಯೊಂದಿಗೆ ಕುಣಿಯುತ್ತ, ಡಿ.ಜೆ ಹಾಡುಗಳನ್ನು ತೋರಿಸುವಂತೆ ಬಿಂಬಿಸಿದ್ದಾರಲ್ಲ ಅವರಿಗೇನು ಮಾಡಬೇಕು ಹೇಳು ಬಾಪು? ಅಂದು ನೀನೇ ಹೇಳಿದ್ದ ಮಾತನ್ನು ಕೇಳುತ್ತೇನೆ, “ಪಾಪವನ್ನು ದ್ವೇಶಿಸು ಆದರೆ ಪಾಪಿಯನ್ನು ಪ್ರೀತಿಸು” ಹೇಳು ಈಗ ಅವರನ್ನು ಕ್ಷಮಿಸಿ ಪ್ರೀತಿಸಬೇಕಾ? ಪ್ರೀತಿ ನೀಡುವುದಕ್ಕೆ ಅವರು ಅರ್ಹರೆ? ಒಂದು ತಪ್ಪನ್ನು, ಒಂದು ಪಾಪವನ್ನು ಕ್ಷಮಿಸುವುದು ಮುಂದಿನ ಪಾಪಕ್ಕೆ ಹಾಕಿದ ಬುನಾದಿಯಾಗುವುದಿಲ್ಲವೆ? ಹೇಳು ಬಾಪು ಇದಕ್ಕೇನು ಮಾಡಬೇಕು ನೀನೇ ಹೇಳು?
ನಿನ್ನ ವಿಷಯ ಬಂದರೆ ಕೆಲವರಿಗೆ ಧರ್ಮ, ಸಿದ್ಧಾಂತ ಎದುರಾಗುತ್ತದೆ. ಮತ್ತೇ ಕೆಲವರಿಗೆ ನಿನ್ನ ನಡೆ ಪ್ರಶ್ನಾರ್ಥಕವಾಗುತ್ತದೆ. ಇನ್ನೂ ಕೆಲವರಿಗೆ ನಿನ್ನ ಆದರ್ಶಗಳು ಗೊಂದಲಮಯವಾಗುತ್ತದೆ. ಆದರೂ ಅದನ್ನೆಲ್ಲ ಮೀರಿ ನೋಡಿದಾಗ ಮಾತ್ರ ನೀನ್ಯಾರೆಂದು ಅವರಿಗೆ ಅರ್ಥವಾಗುತ್ತದೆ. ಬ್ರಿಟೀಷ್ ಸರ್ಕಾರದ ವಿರುದ್ಧ ಹೋರಾಡಿದ ನೀನು ಇಂದು ಅವರಿಗೆ ಆದರ್ಶ. ನಿನ್ನ ಮೂರ್ತಿ ಇಂದು ಅದೇ ಬ್ರಿಟನ್ ದೇಶದ ಪಾರ್ಲಿಮೆಂಟಿನ ಮುಂದೆ ರಾರಾಜಿಸುತ್ತಿರುವುದು ನೋಡಿದಾಗ ನಿನ್ನ ಬದುಕು ತಿಳಿಯುತ್ತದೆ. ವಿಶ್ವ ಸಂಸ್ಥೆಯಲ್ಲಿ ನಿನ್ನ ಭಾವಚಿತ್ರ ನೋಡಿದಾಗ ನಿನ್ನ ಆದರ್ಶದ ಅರಿವಾಗುತ್ತದೆ. ಆದರೆ ಕೇವಲ ನಿನ್ನನ್ನು ಒಂದು ಪಕ್ಷಕ್ಕೆ ಸೀಮಿತ ಮಾಡಿ ತೋರಿಸುತ್ತಿರುವುದೇ ಇಂದು ಇಷ್ಟೊಂದು ನಿನ್ನ ಬಗ್ಗೆ ದ್ವೇಷ ಹುಟ್ಟಿಸುತ್ತಿದೆ. ಮೊದಲೆ ಬೆಳಕು ಕೊಟ್ಟ ದೀಪಕ್ಕಿಂತ ಅದರ ಕೆಳಗಿರುವ ಕತ್ತಲೆಯ ಕುರಿತೆ ಆಲೋಚಿಸುವ ಮನಸ್ಸಿನವರು ನಾವು ಹೀಗಾಗಿ ನಿನ್ನ ವಿಚಾರ ಇವರಾ್ಯರಿಗೂ ಅರ್ಥವಾಗುತ್ತಿಲ್ಲ.
ಬ್ರಿಟೀಷರು ಬಳುವಳಿಯಾಗಿ ಬಿಟ್ಟು ಹೋಗಿರುವ ಮಾಹಿತಿ ಶಿಕ್ಷಣವನ್ನು ಬೋಧಿಸುವುದರಲ್ಲಿ ಮಗ್ನವಾಗಿರುವ ನಾವುಗಳು ಯುವಕರಲ್ಲಿ ಆದರ್ಶಗಳನ್ನು ಕಾಣಬೇಕೆಂದರೆ ಹೇಗೆ ಸಾಧ್ಯವಾಗುತ್ತದೆ? ಪಠ್ಯಪುಸ್ತಕದಲ್ಲಿ ನಿನ್ನ ಕುರಿತು ಹೇಳುವಾಗ ಪೂರ್ಣ ನಿನ್ನ ಆದರ್ಶವನ್ನು ಎಂದೂ ಕಟ್ಟಿಕೊಡಲೇ ಇಲ್ಲ. ಇನ್ನೂ ನಿನ್ನ ಬಗ್ಗೆ ಮಾನಾಡುವಷ್ಟು ಬುದ್ಧಿ ನಮ್ಮ ನಾಯಕರುಗಳಲ್ಲಿಲ್ಲ. ಒಂದುವೇಳೆ ಮಾತನಾಡಬೇಕು ಎಂದು ಬಾಯಿ ತೆರೆದರೆ ಸಾಕು ನಿನ್ನನ್ನು ಹರಿದು ಹಂಚಿ ತಮ್ಮ ಬಾಯಿ ಚಪಲವನ್ನು ತೀರಿಸಿಕೊಂಡು ಬಿಡುತ್ತಾರೆ. ನೀನೇ ಹಾಕಿಕೊಳ್ಳದ ‘ಗಾಂಧಿ ಟೋಪಿಯನ್ನು’ ನಮಗೆ ಹಾಕಿ ಹುಚ್ಚರಾಗಿಸುತ್ತಾರೆ. ಆ ಸಂದರ್ಭದಲ್ಲಿ ನೀವು ತೆಗೆದುಕೊಂಡ ನಿರ್ಧಾರ ಕೆಲವರಿಗೆ ತಪ್ಪೆನ್ನಿಸಬಹುದು; ಅದನ್ನು ನಾನು ಇಲ್ಲವೆಂದು ಹೇಳುವುದಿಲ್ಲ. ಹಾಗೆಂದು ಜಗತ್ತಿಗೆ ನಾಯಕನಾಗಿರುವ ತಮ್ಮನ್ನು ಖಳನಾಯಕನಾಗಿ ತೋರಿಸುವುದರಲ್ಲಿ ಅರ್ಥವೇ ಇಲ್ಲ. ಅಂದು ದೇಶವನ್ನುಳಿಸುವುದಕ್ಕೆ ಲಕ್ಷಾಂತರ ಯುವಕರು ಸ್ವಾತಂತ್ರ್ಯ ಗಂಗೆಯ ಒಡಲಿಗೆ ಧುಮುಕಿದರು. ಆದರೆ ಸ್ವಾತಂತ್ರ್ಯ ಸಿಕ್ಕ ಕೆಲವೇ ವರ್ಷಗಳಲ್ಲಿ ಅವರ ಆದರ್ಶಗಳನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡಿದರು. ನಿನ್ನ ಆದರ್ಶಗಳಂತೂ ಇವರಾ್ಯರು ಮೈಗೂಡಿಸಿಕೊಳ್ಳಲಿಲ್ಲ. ಅದು ಅವರ ಹಣೆಬರಹ, ಆದರೆ ನಿನ್ನ ಜನ್ಮದಿನಾಚರಣೆಯನ್ನು ಹೇಯವಾಗಿ ಚಿತ್ರಿಸುವುದರಿಂದ ವಿಕೃತ ಆನಂದದ ಹೊರತು ಇವರಿಗೆ ಬೇರೆನು ದೊರೆಯಲು ಸಾಧ್ಯ? ಆದರೆ ಅದನ್ನು ನೋಡಿಯೂ ಸುಮ್ಮನೆ ಕೂರುವುದಕ್ಕೆ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ನೀವು ತೋರಿಸಿದ ಮಂಗಗಳ ರೀತಿ ಇದ್ದು ಇದ್ದು ಬೇಸರವಾಗುತ್ತಿದೆ. ಕಾರಣ ಇದು ನಮ್ಮ ದೌರ್ಬಲ್ಯವೆಂದು ಜನ ತಿಳಿದುಕೊಳ್ಳುತ್ತಿದ್ದಾರೆ. ಅದಕ್ಕೆ ಬಾಯಿ ತೆರೆಯಬೇಕಾಗಿರುವುದು ಅನಿವಾರ್ಯ. ನಿನ್ನನ್ನು ಜಗತ್ತಿಗೆ ತೋರಿಸುವ ಅನಿವಾರ್ಯತೆ ಇಲ್ಲ ಕಾರಣ ಇಡೀ ಜಗತ್ತೇ ನಿನ್ನನ್ನು ಅಂದೆ ಒಪ್ಪಿಕೊಂಡಿದೆ. ಆದರೆ ನಿನ್ನ ಆದರ್ಶಗಳನ್ನು ಯುವಜನರಿಗೆ ತೋರಿಸುವುದು ಅನಿವಾರ್ಯವಾಗಿದೆ. ಸರಿ ಬಾಪು ನೀ ಹೇಳಿದಂತೆ ಪಾಪಿಯನ್ನು ಪ್ರೀತಿಸಿ ಅವನ ಪಾಪವನ್ನು ಕ್ಷಮಿಸಿ ಬಿಡೋಣ. ಆದರೆ ಮುಂದೆ ಅವನು ಇಂಥ ಪಾಪವನ್ನು ಮಾಡದಂತೆ ಏನಾದರೂ ಮಾಡಬೇಕಲ್ಲವೇ.. ಅದಕ್ಕಾಗಿಯೆ ನಿನ್ನ ಬಗ್ಗೆ ಅವರಿಗೆ ತಿಳಿಯುವಂತಾಗಲಿ ಹಾಗೂ ನೀನು ಯಾರೊಬ್ಬನ ಆಸ್ತಿಯಲ್ಲ ನಮ್ಮೆಲ್ಲರ ಆದರ್ಶ ಎನ್ನುವುದರ ಅರಿವು ಮೂಡಿಸುವುದು ಅತ್ಯಗತ್ಯ. ಕೊನೆಯದಾಗಿ ನಮ್ಮವರು ಮಾಡಿದ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ ದಯವಿಟ್ಟು ಕ್ಷಮಿಸಿಬಿಡು ಬಾಪು. ನಮ್ಮನ್ನು ದಯವಿಟ್ಟು ಕ್ಷಮಿಸಿ ಬಿಡು.
- * * * -