ಬೆಂಗಳೂರು, ಜು.9: ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಚುನಾಯಿತ ಜನಪ್ರತಿನಿಧಿಗಳು ಎಲ್ಲಾ ಕಾರ್ಪೋರೇಟರ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಬೆಂಗಳೂರು ಕೋವಿಡ್ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೋವಿಡ್ ನಿಯಂತ್ರಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅಶೋಕ್ ಎಚ್ಚರಿಸಿದರು.
ವಿಪಕ್ಷಗಳು ಆರೋಪಿಸುತ್ತಿರುವಂತೆ ಕೋವಿಡ್ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ವೃಥಾ ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆ ಒದಗಿಸುತ್ತಿಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಚ ಈಶ್ವರ್ ಖಂಡ್ರೆ ಬೇರೆ ಯಾವುದಾದರೂ ದಾಖಲೆ ಇದ್ದರೆ ಕೊಡಲಿ. ಸಿದ್ದರಾಮಯ್ಯ ದಾಖಲೆ ವಿಚಾರದಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಿದ್ದಾರೆಯೋ ಅವರೇ ತಮ್ಮ ಯಾವುದೇ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಮುರುಗೇಶ್ ನಿರಾಣಿ ಹೆಸರನ್ನು ಪ್ರಸ್ತಾಪಿಸದೇ ಹೇಳಿದರು.
ಹಗರಣ ನಡೆದಿದೆ ಎಂದು ಆರೋಪಿಸುವವರು ಸರ್ಕಾರಕ್ಕೆ ದಾಖಲೆ ಒದಗಿಸಿದರೆ ಸರ್ಕಾರ ಉತ್ತರ ಕೊಡುವುದಕ್ಕೆ ಸಿದ್ಧವಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.