ಬಿಡಿಎ ಮೂಲೆ ನಿವೇಶನಗಳ ಅಕ್ರಮಗಳ ಬಗ್ಗೆ ತನಿಖೆ: ಯಡಿಯೂರಪ್ಪ

ಬೆಂಗಳೂರು, ಮಾ 19, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ  ಒಟ್ಟು 1420 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಕೆಲವು ಸಂಸ್ಥೆಗಳು ಸಿಎ  ನಿವೇಶನಗಳನ್ನು ಪಡೆದ ಉದ್ದೇಶಗಳಿಗಾಗಿ ಉಪಯೋಗಿದೇ ಇರುವುದು  ಸರ್ಕಾರದ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ತಿಗಿಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನ ಎಂ. ಸಿ. ವೇಣುಗೋಪಾಲ್ ಪ್ರಶ್ನೆಗೆ ಉತ್ತರಿಸಿದ ಅವರು, ಹಂಚಿಕೆ ಮಾಡಲಾದ ಉದ್ದೇಶವನ್ನು ಬಿಟ್ಟು ಬೇರೆ ಉದ್ದೇಶಗಳಿಗೆ ಸಿಎ ನಿವೇಶನಗಳನ್ನು ಉಪಯೋಗಿಸಿಕೊಂಡಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಬೆಂಗಳೂರು   ಅಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನ ಹಂಚಿಕೆ ನಿಯಮಾವಳಿ 1989ರಂತೆ ಮೊದಲಿಗೆ ಕಾರಣಾಪೇಕ್ಷಿತ ಪತ್ರವನ್ನು ನೀಡಿ ನಂತರ ರದ್ದುಪಡಿಸಲಾಗುತ್ತದೆ. ಈ ರೀತಿ ರದ್ದುಪಡಿಸಲಾದ ಪ್ರಾಧಿಕಾರದ ಕ್ರಮದ ವಿರುದ್ಧ ಕೆಲವು ಸಂಘಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ತಡೆಯಾಜ್ಞೆ ತೆರವಾದ ನಂತರ ಕಾನೂನಿನ ಪ್ರಕಾರ ಕ್ರಮತೆಗೆದುಕೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಉತ್ತರಕ್ಕೆ ಸಮಾಧಾನಗೊಳ್ಳದ ವೇಣುಗೋಪಾಲ್, 1402 ಸಿಎ ನಿವೇಷನಗಳು ಹಂಚಿಕೆ ಆಗಿವೆ. ಆದರೆ ನಾನು ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಮೂಲೆ ನಿವೇಶ ಹಂಚಿಕೆ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಸಿಎ ನಿವೇಶನ ಕುರಿತಂತೆ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಮುಖ್ಯಮಂತ್ರಿಗಳು, ಕಾನೂನು ಉಲ್ಲಂಘಿಸಿದ್ದಲ್ಲಿ ನಿವೇಶನ ವಾಪಸ್ ಪಡೆಯಲಾಗುತ್ತದೆ.  ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದರು. ಆಗ ಸಿ ಎ ನಿವೇಶನ ಬೇರೆಯದ್ದೇ ಉದ್ದೇಶ ಕ್ಕೆ ಬಳಕೆಯಾಗುತ್ತದೆ.ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಜೆಡಿಎಸ್ನ ಶ್ರೀಕಂಠೇಗೌಡಗೌಡ ಹೇಳಿದಾಗ, ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ, ಖಂಡಿತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಜೊತೆಗೆ ಅಕ್ರಮ ಕಂಡುಬಂದ ಸಿಎ ನಿವೇಶನಗಳ ಮುಟ್ಟುಗೊಲು ಹಾಕಿಕೊಳ್ಳುವ ಜೊತೆಗೆ ಹರಾಜು ಹಾಕಲಾಗುವುದು ಎಂದರು.