ಹಾನಗಲ್ 27: ತಾಲೂಕಿನಲ್ಲಿ ಈಗಾಗಲೇ ಅಂತಿಮ ಅಧಿಸೂಚನೆಯಾಗಿರುವ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ ಹಕ್ಕುಪತ್ರಗಳಿಗೆ ಅನುಮೋದನೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕಾಲಮಿತಿ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಹಾನಗಲ್ ತಾಲೂಕಿನ ನಾನಾ ಸಾರ್ವಜನಿಕ ಹಾಗೂ ರೈತ ಸಮಸ್ಯೆಗಳ ಕುರಿತು ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಬಗರ್ ಹುಕುಂ ಸಮಿತಿಗಳಲ್ಲಿ ಈ ಹಿಂದೆ ಮಂಜೂರಾಗಿರುವ ಕೆಲವು ಜಮೀನುಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿರುವುದಿಲ್ಲ. ಈ ಕುರಿತು ಪರೀಶೀಲನೆ ನಡೆಸಿ, ಕ್ರಮ ವಹಿಸಿ ಎಂದರು.
ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಸ್ವೀಕರಿಸಲಾದ ಸಾರ್ವಜನಿಕರು ಮತ್ತು ರೈತರ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಬೇಕು. ಯಾವುದೇ ಹಂತಗಳಲ್ಲಿಯೂ ಸಹ ವಿಳಂಬವಾಗದಂತೆ ಕಾಳಜಿ ವಹಿಸಿ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರಿ ಮಾಡುವಂತೆ ತಹಶೀಲ್ದಾರ್ ಕಚೇರಿಯಿಂದ ಕಳುಹಿಸಲಾಗಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಪಶು ಆಹಾರಕ್ಕಾಗಿ ಮೇವು ಸಾಂದ್ರಿಕರಣ ಘಟಕ, ಮೇವಿನ ಬ್ಯಾಂಕ್ ಹಾಗೂ ರೈತರ ತರಬೇತಿ ಕೇಂದ್ರ ನಿರ್ಮಾಣಕ್ಕೆ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 30 ಎಕರೆ ಜಮೀನು ಮಂಜೂರಿ ಮಾಡಲು ಪ್ರಸ್ತಾವನೆ ತಯಾರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಸರಕಾರಕ್ಕೆ ಕಳುಹಿಸುವಂತೆ ಹೇಳಿದರು.