ಧಾರವಾಡ 13: ವೈದ್ಯ ವಿಜ್ಞಾನ ದೈಹಿಕ ಆರೋಗ್ಯದತ್ತ ಗಮನ ಹರಿಸಿದರೆ, ಸಂಗೀತ ಕ್ಷೇತ್ರ ಮಾನಸಿಕ ಆರೋಗ್ಯವನ್ನು ಹೆಚ್ಚು ಮಾಡುತ್ತದೆ, ಅಂತೆಯೇ ವೈದ್ಯರಿಗೂ, ಸಂಗೀತಗಾರರಿಗೂ ಅನ್ಯೋನ್ಯ ಸಂಬಂಧ ಎಂದು ಖ್ಯಾತ ವೈದ್ಯ ಡಾ.ಕುಲಕರ್ಣಿ ಸೌಭಾಗ್ಯ ಹೇಳಿದರು.
ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಧಾರವಾಡ, ಹು-ಧಾ ನಾಗರಿಕ ಪರಿಸರ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ 75 ನೇ ಸ್ಮೃತಿ ಸಂಗೀತೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು 'ಪಂ. ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅಂತಹ ದಿಗ್ಗಜ ಕಲಾವಿದರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಹೆಸರಾಂತ ಗಾಯಕ ಪಂ. ಶ್ರೀಪಾದ ಹೆಗಡೆ 'ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಒಂದು ದೊಡ್ಡ ಸಂಗೀತದ ಪರಂಪರೆಯನ್ನೇ ಹುಟ್ಟುಹಾಕಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ನಾವು ಭಾಗ್ಯಶಾಲಿಗಳು ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಸಂಗೀತೋತ್ಸವದಲ್ಲಿ ಹೆಸರಾಂತ ಸೀತಾರ ವಾದಕ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ ಸಿತಾರನಲ್ಲಿ ಕುಸುಮರಂಜಿನಿ ರಾಗವನ್ನು ಉತ್ಸಾಹದಿಂದ ನುಡಿಸಿ, ಕಲಾ ರಸಿಕರ ಮನತಣಿಸಿದರು. ಶಾಸ್ತ್ರೀಯ ಸಂಗೀತದ ರಸಧಾರೆಯೊಂದಿಗೆ ಪಂಡಿತ ಶ್ರೀಪಾದ ಹೆಗಡೆ ಅವರು ಭೈರವಿ ರಾಗದಲ್ಲಿ 'ಚಕೋರಂಗೆ ಚಂದ್ರಮನ' ವಚನವನ್ನು ಸಾದರಪಡಿಸಿ, ನಾದ ಮಾಧುರ್ಯವನ್ನು ಹರಿಸಿದರು. ಪ್ರತಿಭಾಪೂರ್ಣ, ಉತ್ಸಾಹಭರತಿ ತಬಲಾ ಸಾಥಿಯೊಂದಿಗೆ ಡಾ. ರವಿಕಿರಣ ನಾಕೋಡ ಗಮನಸೆಳೆದರೆ, ಮೃದುಮಧುರ ಸಂವಾದಿನಿಯಾಗಿ ಸಾಥ್ ನೀಡಿದರು. ಖ್ಯಾತ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಾಗವೇಣಿ ಹೆಗಡೆ ಅದ್ಭುತ ಗಾನಧಾರೆಯನ್ನು ಹರಿಸಿದರು. ಈ ಕಾರ್ಯಕ್ರಮ ಬಹುಕಾಲ ಸಂಗೀತ ಪ್ರೀಯರ ಮನದಲ್ಲಿ ನೆಲೆನಿಲ್ಲುವಂಥದ್ದು. ಪ್ರತಿಷ್ಠಾನದ ಕಾರ್ಯದರ್ಶಿ ಪದ್ಮಶ್ರೀ ಪಂ. ವೆಂಕಟೇಶಕುಮಾರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಐಶ್ವರ್ಯಾ ದೇಸಾಯಿ ಪ್ರಾರ್ಥಿಸಿದರು . ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಮಾಯಾ ಚಿಕ್ಕೇರೂರ ನಿರೂಪಿಸಿದರು. ಡಾ. ಅಜುನ ವಠಾರ ವಂದಿಸಿದರು.
ಪಂ. ಶಿವಾನಂದ ತರ್ಲಗಟ್ಟಿ, ಪಂ. ಬಿ.ಎಸ್. ಮಠ, ಪಂ. ರಘುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ, ಅಕ್ಕಮಹಾದೇವಿ ಮಠ, ಸುಜಾತಾ ಕಮ್ಮಾರ, ಉಸ್ತಾದ್ ರಫೀಕ್ಖಾನ್, ಪಂ. ಸಾಡಲಿಂಗಪ್ಪ ದೇಸಾಯಿ, ರಾಧಾ ದೇಸಾಯಿ, ಬಸವರಾಜ ಹಿರೇಮಠ, ಆರತಿ ಪಾಟೀಲ, ಡಾ. ಉದಯ ದೇಸಾಯಿ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.