ಗುವಾಹಟಿ,
ಡಿ.20 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉಂಟಾದ ಹಿಂಸಾತ್ಮಕ ಪ್ರತಿಭಟನೆಯ ನಂತರ ಅಮಾನತುಗೊಂಡ
10 ದಿನಗಳ ನಂತರ ಅಸ್ಸಾಂನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಇಂದು ಬೆಳಗ್ಗೆ 9 ಗಂಟೆಗೆ ಪುನಾರಂಭಗೊಂಡಿವೆ.ಪೌರತ್ವ
ತಿದ್ದುಪಡಿ ಕಾಯ್ದೆಯ ವಿರುದ್ಧ ಹಿಂಸಾಚಾರ ಭುಗಿಲೆದ್ದ ಡಿಸೆಂಬರ್ 11ರ ಸಂಜೆಯಿಂದ ಇಲ್ಲಿ ಅಂತರ್ಜಾಲ
ಸೇವೆಯನ್ನು ಅಮಾನತುಗೊಳಿಸಲಾಗಿತ್ತು.ಗುವಾಹಟಿ ಹೈಕೋರ್ಟ್ ನಿನ್ನೆ ಮಧ್ಯಂತರ ಆದೇಶ ಹೊರಡಿಸಿ, ಮೊಬೈಲ್
ಇಂಟರ್ನೆಟ್ ಸೇವೆಗಳನ್ನು ನಿನ್ನೆ 6 ಗಂಟೆಗೆ ಮರುಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.ಆದಾಗ್ಯೂ
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಇಂದು ಬೆಳಗ್ಗೆ ಸೇವೆಯನ್ನು ಪುನಾರಂಭಿಸಲಾಗಿದೆ.ಎಲ್ಲಾ ಸೇವಾ
ಪೂರೈಕೆದಾರರ ಬ್ರಾಡ್‌ಬ್ಯಾಂಡ್ ಸೇವೆಯನ್ನು ಡಿಸೆಂಬರ್ 17 ರಿಂದ ಸರ್ಕಾರವು ಪುನಃಸ್ಥಾಪಿಸಲು ಅನುಮತಿಸಿತ್ತು,
ಆದರೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.2014 ರ ಡಿಸೆಂಬರ್ 31ರ ಮೊದಲು ಬಾಂಗ್ಲಾದೇಶ,
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದ್ದ ಅಕ್ರಮ ಹಿಂದೂ, ಪಾರ್ಸಿ, ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್
ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸುವ ಸಿಎಎ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ
ನಡೆಯುತ್ತಿದೆ. ನೆರೆಯ ಬಾಂಗ್ಲಾದೇಶದ ಮುಸ್ಲಿಮೇತರರ
ಆಗಮನದಿಂದ ನಮ್ಮ ಸಂಸ್ಕೃತಿ, ಭಾಷೆ ನಾಶವಾಗುತ್ತದೆ ಎಂಬ ಭಯದಿಂದಾಗಿ ಇದನ್ನು ಹಿಂಪಡೆದುಕೊಳ್ಳುವಂತೆ
ಈಶಾನ್ಯ ರಾಜ್ಯಗಳ ಜನರು, ವಿಶೇಷವಾಗಿ ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳ ಜನರು ಒತ್ತಾಯಿಸುತ್ತಿದ್ದಾರೆ.