ಬೆಂಗಳೂರು, ಜೂ.21, ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಶುಭ ಕೋರಿದ್ದಾರೆ.ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅತ್ಯುತ್ತಮ ಮಾರ್ಗವಾಗಿರುವ ಯೋಗವನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.ದೈಹಿಕ ಮತ್ತು ಮಾನಸಿಕ ಚೈತನ್ಯವನ್ನು ಉದ್ದೀಪಿಸುವ ಅದ್ಭುತ ವಿದ್ಯೆಯಾದ ಯೋಗವು ನಮ್ಮೆಲ್ಲರ ದೈನಂದಿನ ಚಟುವಟಿಕೆಯ ಭಾಗವಾಗಿರಲಿ.
ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ ಎಂಬುದು ಈ ಬಾರಿಯ ಯೋಗ ದಿನದ ಘೋಷವಾಕ್ಯವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮನೆಗಳಲ್ಲಿಯೇ ಯೋಗ ದಿನವನ್ನು ಆಚರಿಸೋಣ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಇಡೀ ಜಗತ್ತು ಸಾಂಕ್ರಾಮಿಕ ಎದುರಿಸುತ್ತಿರುವ, ಸ್ವಾಸ್ಥ್ಯ ಹೆಚ್ಚಿನ ಪ್ರಾಮುಖ್ಯತೆ ಗಳಿಸಿರುವ ಸಮಯದಲ್ಲಿ ನಾವು ಯೋಗ ದಿನ ಆಚರಿಸುತ್ತಿದ್ದೇವೆ. ರೋಗನಿರೋಧಕ ಶಕ್ತಿಯನ್ನು, ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸುವ ಯೋಗ ನಮ್ಮ ಆರೋಗ್ಯ ರಕ್ಷಾಕವಚವಾಗಿದೆ. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ ಎಂದು ಶುಭ ಹಾರೈಸಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ದೇಹದ ಸರ್ವಾಂಗೀಣ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ. ಆರೋಗ್ಯವಂತ ಕಾಯ, ಮನಸ್ಸಿಗೆ ಯೋಗ ಉಪಯುಕ್ತ. ಯೋಗಾಭ್ಯಾಸದ ಮೂಲಕ ಹೊಸಜೀವನ ಶೈಲಿ ರೂಢಿಸಿಕೊಳ್ಳೋಣ ಎಂದು ಹೇಳಿದ್ದಾರೆ.ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, ಸರ್ವರಿಗೂ ವಿಶ್ವ ಯೋಗ ದಿನದ ಹಾರ್ದಿಕ ಶುಭಾಶಯಗಳು. ಯೋಗ ಮಾಡೋಣ, ಯೋಗ ಪಸರಿಸೋಣ, ಯೋಗಾಯೋಗ ಪಡೆಯೋಣ ಎಂದು ಶುಭ ಕೋರಿದ್ದಾರೆ.