ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ವಿಜಯಪುರ, 06; ಸಾಧನೆಯು ನಿರಂತರ ಅದನ್ನು ಅರಿತರೆ ಮಹಿಳೆ ತನ್ನ ಜೀವನದಲ್ಲಿ ಯಶಸ್ಸು ಗಳಿಸಬಲ್ಲಳು ಎಂದು ಕಲಬುರಗಿಯ ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ “ಮಹಿಳಾ ಸಾಂಸ್ಕೃತಿಕ ಹಬ್ಬ-2025” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ, ಅವರನ್ನು ಕೇವಲ ಅಡುಗೆಮನೆಗೆ ಮಾತ್ರ ಸೀಮಿತಗೊಳಿಸುವ ಪರಂಪರೆ ಚಿಂತನೆ ಇನ್ನೂ ಮುಂದುವರಿಯುತ್ತಿದೆ. ಮಹಿಳೆಯರು ಧೈರ್ಯದಿಂದ ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ. ಮಹಿಳೆಯರು ಮುಂದುವರಿಯಲು ಕೇವಲ ಸೌಂದರ್ಯವಷ್ಟೇ ಅಲ್ಲ, ಅವರ ಗುಣ, ಸಾಧನೆ ಹಾಗೂ ನಡೆ-ನುಡಿಗಳು ಮುಖ್ಯವಾಗಿವೆ. ನಮ್ಮ ಕಾರ್ಯಗಳು ನಮ್ಮ ಕುಟುಂಬ, ಸಮಾಜ ಹಾಗೂ ಸಂಸ್ಥೆಗೆ ಹೆಮ್ಮೆ ತಂದುಕೊಡಬೇಕು ಎಂದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರೂಮಿ ಹರೀಶ ಮಾತನಾಡಿ, ಮಾನವ ಹಕ್ಕುಗಳೇ ಮಹಿಳಾ ಹಕ್ಕುಗಳಾಗಿದ್ದರೂ, ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕುಟುಂಬದಲ್ಲಿ ಕೌಟುಂಬಿಕ ದೌರ್ಜನ್ಯ, ಮನಸ್ಥಾಪ ಉಂಟುಮಾಡುವ ಕಿರುಕುಳ, ಹಾಗೂ ಸಮಾಜದಲ್ಲಿ ಶೋಷಣೆ, ಅಸಮಾನತೆ ಮತ್ತು ಆರ್ಥಿಕ-ಶೈಕ್ಷಣಿಕ ಅಡೆತಡೆಗಳು ಅವರ ಮುನ್ನಡೆಯಿಗೆ ಬಾಧಕವಾಗುತ್ತಿವೆ. ಆದರೂ, ಈ ಎಲ್ಲ ಸವಾಲುಗಳನ್ನು ಧೈರ್ಯ, ಮನೋಬಲ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಮಹಿಳೆಯಲ್ಲಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವ ಪ್ರತಿಯೊಬ್ಬ ಮಹಿಳೆಯ ಹಕ್ಕುಗಳು ಆಗಬೇಕಾಗಿದ್ದು, ಅದನ್ನು ಸಾಧಿಸಲು ನಿರಂತರ ಹೋರಾಟ ಮತ್ತು ಶಿಕ್ಷಣ ಅವಶ್ಯಕವಾಗಿದೆ. ಮಹಿಳೆಯರ ಸಬಲತೆ ಮತ್ತು ಸ್ವಾಯತ್ತತೆಯೇ ನಿಜವಾದ ಪ್ರಗತಿಯ ದಾರಿ ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ರಸ ಪ್ರಶ್ನೇ ಕೇಳುವುದರ ಮೂಲಕ ವಿದ್ಯಾರ್ಥಿನಿಯರಿಗೆ ಹುರಿದೃಂಬಿಸಿದರು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಸಮಾನತೆ, ಹಕ್ಕು, ಮತ್ತು ಸಬಲೀಕರಣ ಎನ್ನುವುದು ಇಗಲುಕೂಡಾ ಅವಶ್ಯಕತೆ ಇದೆ. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಚಿಂತನೆ ಮತ್ತು ಕಾರ್ಯಾಚರಣೆ ಅಗತ್ಯ. ಸರ್ಕಾರ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳು ಮತ್ತು ನೀತಿಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮಹಿಳೆಯರು ತಮ್ಮ ಜೀವನದಲ್ಲಿ ಮುನ್ನಡೆಯಬೇಕು. ಶಿಕ್ಷಣ, ಆರ್ಥಿಕ ಸ್ವಾಯತ್ತತೆ, ಮತ್ತು ಸ್ವಾಭಿಮಾನವನ್ನು ವೃದ್ಧಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಸಬಲವಾಗಿ ಮುಂದುವರಿಯುವ ಮೂಲಕ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದರು. ಸಿಂಡಿಕೇಟ್ ಸದಸ್ಯೆ ಮಲ್ಲಮ್ಮಾ ಯಾಳವಾರ ಕಾರ್ಯವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸಂವಿಧಾನ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದರೂ, ನಾವೀಗೂ ಸಬಲೀಕರಣವನ್ನು ಸಂಪೂರ್ಣವಾಗಿ ಅನುಭವಿಸುವ ಸ್ಥಿತಿಗೆ ಬಂದಿಲ್ಲ. ಅದು ಇನ್ನೂ ಮರೀಚಿಕೆಯಂತಾಗಿದೆ. ಮಹಿಳಾ ಸಬಲೀಕರಣ ಶಿಕ್ಷಣದ ಮೂಲಕವೇ ಸಾಧ್ಯ. ಕಾನೂನಿನ ಅರಿವು ಮತ್ತು ಹಕ್ಕುಗಳ ಪ್ರಜ್ಞೆ ಗ್ರಾಮೀಣ ಮಹಿಳೆಯರಿಗೆ ತಲುಪುವ ಅಗತ್ಯವಿದೆ. ಸರ್ಕಾರ ಹಿಂತಿರುಗಿದ ಪ್ರದೇಶಗಳಿಗಾಗಿ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದರೂ, ಎಷ್ಟು ಗ್ರಾಮೀಣ ಮಹಿಳೆಯರು ಕಾಲೇಜುಗಳ ದಡಸಾಲನ್ನು ದಾಟುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಪೋಷಕರು ಇನ್ನೂ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ, ಇದನ್ನು ಬದಲಾಯಿಸುವುದು ಅತ್ಯಗತ್ಯ. ಮನೆಯನ್ನು ಸುಧಾರಿಸುವಂತೆಯೇ, ಸಮಾಜ ಮತ್ತು ದೇಶದ ಅಭಿವೃದ್ಧಿಗೂ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಮಾತನಾಡಿ, ಶಿಕ್ಷಣ ಪಡೆದರೆ ಆರ್ಷಿಕವಾಗಿ ಮುನ್ನಡೆದರೆ ಮಾತ್ರ ಮಹಿಳಾ ಸಬಲೀಕರಣವಾಗುವುದಿಲ್ಲ, ಎಲ್ಲ ಕೇತ್ರಗಳಲ್ಲೂ ಮಹಿಳೆ ಮುಂದೆ ಸಾಗುವಂತಾದಾಗ ಮಹಿಳೆ ಸಬಲೀಕರಣವಾಗುವುದು. ದೇಶದ ಅಭಿವೃದ್ಧಿಯಲ್ಲಿ ಸಮಾನ ಅವಕಾಶ ಮಹಿಳೆಯದಾಗಬೇಕು. ವಿವಿಧ ಅಭಿವೃದ್ಧಿಯನ್ನು ಸಾಧಿಸುವಲ್ಲಿ ನಮ್ಮ ಮಹಿಳಾ ವಿವಿ ಸಾಕ್ಷಿಯಾಗಿದೆ. ನಮ್ಮನ ನಾವೇ ತೀರಸ್ಕರಿಸುವ ಮನೋಭಾವವನ್ನು ತೇಜಿಸಿ ಎನೆ ಬಂದರು ಮುಂದೆ ಸಾಗಬೇಕು ಎನ್ನುವ ಧೈರ್ಯ ಮಹಿಳೆಯರಲ್ಲಿ ಬೇಕು ಎಂದರು. ಮಹಿಳಾ ಸಾಂಸ್ಕೃತಿಕ ಹಬ್ಬ-2025 ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕನ್ನಡ ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ಬಂಜಾರಾ ಸಮುದಾಯದ ಯುವತಿಯರಿಂದ ನೃತ್ಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ಲೇಜಿಮ್ ಮೂಲಕ ವಿವಿಯ ಮುಂಭಾಗದಿಂದ ವೇದಿಕೆಯ ವರೆಗೆ ಸಾಂಸ್ಕೃತಿಕ ಮೆರವಣಿಗೆ ಏರಿ್ಡಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನ್‌ರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಮತ್ತು ಹೋರಾಟ ಗೀತೆಯನ್ನು ಹಾಡಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ. ಲಕ್ಷ್ಮೀದೇವಿ ವೈ, ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕಲಾವತಿ ಕಾಂಬಳೆ, ಹಾಗೂ ಡಾ.ಭಾಗಶ್ರೀ ದೊಡ್ಡಮನಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಸರೋಜಾ ಸಂತಿ ವಂದಿಸಿದರು. ಡಾ.ಜೋತಿ ಉಪಾದ್ಯೆ ಕಾರ್ಯಕ್ರಮವನ್ನು ನಿರೂಪಿಸಿದರು.