ಬೆಂಗಳೂರು, ಜ.09 ಮುಂದಿನ ತಿಂಗಳು 26 ರಿಂದ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಚಲನಚಿತ್ರೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಲಾಂಛನ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ.ಪಾಟೀಲ್, ಶಾಸಕ ಎಸ್.ಆರ್ವಿಶ್ವನಾಥ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಉಪಸ್ಥಿತರಿದ್ದರು.
ಫೆಬ್ರವರಿ 26 ರಂದು ಒರಾಯನ್ ಮಾಲ್ ನಲ್ಲಿ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಮಾರ್ಚ್ 4 ರವರೆಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ. ವಿಶ್ವದ 50 ದೇಶಗಳಿಂದ 200 ಸಮಕಾಲೀನ ಚಿತ್ರಗಳು ಪ್ರದರ್ಶನಗೊಳ್ಳಿಲಿದೆ ಎಂದು ಮುಖ್ಯಮಂತ್ರಿಯವರು ವಿವರಣೆ ನೀಡಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಈ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾನ್ಯತೆ ಸಿಗುವ ಸಾಧ್ಯತೆಯಿದೆ ಎಂದರು.