ಜೆ.ಎಸ್‌.ಎಸ್‌. ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಬೆಳಕಿನ ದಿನ-2026 ಆಚರಣೆ

ಜೆ.ಎಸ್‌.ಎಸ್‌. ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಬೆಳಕಿನ ದಿನ-2026 ಆಚರಣೆ International Day of Light-2026 Celebration at J.S.S. College

        ಧಾರವಾಡ 20 : ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದವತಿಯಿಂದ ಯುನೆಸ್ಕೊ ಗೊತ್ತುಪಡಿಸಿದ “ಅಂತರಾಷ್ಟ್ರೀಯ ಬೆಳಕಿನ ದಿನ-2026” ವನ್ನು ಮೇ 16 ರಂದು ಆಚರಿಸಲಾಯಿತು. ಜೆ.ಎಸ್‌.ಎಸ್‌. ಮಹಾವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಎಸ್‌.ಪಿ.ಐ.ಇ. (ಯುಎಸ್‌ಎ) ಕೆ.ಯು.ಡಿ. ವಿದ್ಯಾರ್ಥಿ ಅಧ್ಯಾಯವು ಜಂಟಿಯಾಗಿ ಆಯೋಜಿಸಿದ್ದ ಒಂದು ದಿನದ ಕೌಶಲ್ಯಾಧಾರಿತ ಕಾರ್ಯಾಗಾರದಲ್ಲಿ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ‘ಪೊಲ್ಡಸ್ಕೋಪ್ ಮೈಕ್ರೋಸ್ಕೋಪ್‌’ ಕುರಿತು ಪ್ರಾಯೋಗಿಕ ತರಬೇತಿಯನ್ನು ಕೊಡಲಾಯಿತು. 

ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿ, ಲೇಸರ್ ಶಸ್ತ್ರಚಿಕಿತ್ಸೆ ಪ್ರಾಮುಖ್ಯತೆಯನ್ನು ತಿಳಿಸಿದರು. ಮೇ 16, 1990 ರಂದು ಮೈಮನ್ ಅವರ ಮೊದಲ ಯಶಸ್ವಿ ಲೇಸರ್ ಶಸ್ತ್ರಚಿಕಿತ್ಸೆ ಸ್ಮರಣಾರ್ಥ ವಾರ್ಷಿಕವಾಗಿ ಅಂತರರಾಷ್ಟ್ರೀಯ ಬೆಳಕಿನ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು. ಲೇಸರ್ ಶಸ್ತ್ರಚಿಕಿತ್ಸೆ (ಲೇಸರ್ ಆಂಜಿಯ್ಯೋಪ್ಲ್ಯಾಸ್ಟಿ) ವಿಧಾನದಲ್ಲಿ ಹೇಗೆ ಲೇಸರ್ ಬೆಳಕಿನ ಶಕ್ತಿಯಿಂದ ರಕ್ತನಾಳದ ಬ್ಲಾಕೇಜ್‌ನ್ನು ಕರಗಿಸಿ, ರಕ್ತ ಸಂಚಾರವನ್ನು ಸುಗುಮಗೊಳಿಸುತ್ತಾರೆ ಮತ್ತು ಲೇಸರ್ ಶಸ್ತ್ರಚಿಕಿತ್ಸೆಯ ಪ್ರಯೋಜನಗಳ ಬಗ್ಗೆ ಮಾತನಾಡಿದರು. 

ಕಾರ್ಯಾಗಾರದ ಮುಖ್ಯ ಭಾಷಣಕಾರರಾದ ಡಾ. ಕೆ.ವಿ. ಸತ್ಯಮೂರ್ತಿ, ಪ್ರಖ್ಯಾತ ನೇತ್ರ ತಜ್ಞರು, ಎಂ.ಎಂ. ಜೋಶಿ ನೇತ್ರಾಲಯ, ಧಾರವಾಡ ಇವರು ನೇತ್ರ ಚಿಕಿತ್ಸೆಯಲ್ಲಿ ಲೇಸರ್‌ಗಳ ಬಳಕೆ, ಕಾರ್ನಿಯಾ ಮತ್ತು ರಿಫ್ರಾಕ್ಟಿವ್ ಸರ್ಜರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವಿಧ ದೃಷ್ಟಿ ದೋಷಗಳನ್ನು ಸರಿಪಡಿಸಲು ಹೇಗೆ ಮತ್ತು ಯಾವ ಲೆನ್ಸಗಳನ್ನು ಬಳಸುತ್ತಾರೆ ಮತ್ತು ಅವುಗಳನ್ನು ಹೇಗೆ ಅಳವಡಿಸುತ್ತಾರೆ ಎಂಬುದನ್ನು ವಿಡಿಯೋ ಮುಖಾಂತರ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ. ಲಕ್ಷ್ಮೀ ಎಸ್‌. ಇನಾಮದಾರ, ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಕ.ವಿ.ವಿ. ಧಾರವಾಡ ಅವರು ವಿವಿಧ ಸೂಕ್ಷ್ಮದರ್ಶಕಗಳ ಆಪ್ಟಿಕಲ್ ಮಾರ್ಗಗಳ ಕುರಿತು ಹಾಗೂ ವಿವಿಧ ಸುಧಾರಿತ ಸೂಕ್ಷ್ಮದರ್ಶಕಗಳ ಕಾರ್ಯ ನಿರ್ವಹಣೆ ಮತ್ತು ಅವುಗಳ ಉಪಯೋಗಗಳನ್ನು ವಿವರಿಸಿದರು. 

ಗುಲ್ಬರ್ಗ ಮತ್ತು ಬಿಎಲ್‌ಡಿಇ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ ಅವರು ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಲು ಮತ್ತು ‘ವಿಕ್ಷಿತ್ ಭಾರತ-2047’ಕ್ಕೆ ಶ್ರಮಿಸಲು ಸಲಹೆ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವೆಂಕಟೇಶ ಮುತಾಲಿಕ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಬೆಳಕು, ಜ್ಞಾನ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ಬೆಳಕಿನ ಪಾತ್ರ ಮಹತ್ವದ್ದಾಗಿದೆ ಎಂದರು. ಪ್ರೊ. ಜಯಶ್ರೀ ಟೋಣಣ್ಣವರ್, ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ, ಕ.ವಿ.ವಿ., ಪ್ರೊ. ಸಂಜೀವ ಇನಾಮದಾರ, ನಿವೃತ್ತ ಪ್ರೋಪೆಸರ್, ಭೌತಶಾಸ್ತ್ರ ವಿಭಾಗ, ಕ.ವಿ.ವಿ. ಧಾರವಾಡ, ಜೆ.ಎಸ್‌.ಎಸ್‌. ಭಾತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ. ಬಿ.ಎಂ. ಬಿಂದುಶ್ರೀ ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ. ಶೌಕತಅಲಿ ಮೇಗಲಮನಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಸಮಾರೋಪ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ ಅವರು ಆಗಮಿಸಿ, ಬೆಳಕಿನ ಮಹ್ವತದ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ರಾ​‍್ಯಂಕ್ ಹಾಗೂ ಗೋಲ್ಡ್‌ ಮೆಡಲ್ ಪಡೆದ ಹಾಗೂ ಋಖಿ-ಎಂಒ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಮಹಿಮಾ ಹೆಗಡೆ ಪ್ರಾರ್ಥಿಸಿದರು. ಬಿ.ಎಂ. ಬಿಂದುಶ್ರೀ ಸ್ವಾಗತಿಸಿದರು. ಶಾಲಿನಿ ಮಹೇಂದ್ರಕರ ಪರಿಚಯಿಸಿದರು. ಡಾ. ಬಿ.ಐ. ಅಲದಿ ವಂದಿಸಿದರು.. ಪ್ರಜ್ಞಾ ಸಾಬನೆ ನಿರೂಪಿಸಿದರು. ಅಧ್ಯಾಪಕರುಗಳಾದ ವೀಣಾ ಕೆ., ಮಾರ್ಗರೆಟ್ ಕೆ., ರೋಹಿಣಿ ಐ.ಕೆ. ಮತ್ತು ವಚನಾ ಡಿ.ಎಫ್‌. ಉಪಸ್ಥಿತರಿದ್ದರು.