ಮಧ್ಯಂತರ ಚುನಾವಣೆ ನಿಶ್ಚಿತ: ಎಚ್ ಡಿ ದೇವೇಗೌಡ- ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಜೆಡಿಎಸ್ ವರಿಷ್ಠರ ಹೇಳಿಕೆ

       ಬೆಂಗಳೂರು, ಜೂ 21: ಸರ್ಕಾರ  ಎಷ್ಟು ದಿನ ಇರುತ್ತದೆ ಎಂಬುದು ತಮಗೂ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ಮುಖಂಡರ ಕೈಯಲ್ಲಿದೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು  ನಿಶ್ಚಿತ, ಅದರಲ್ಲಿ ಸಂಶಯವೇ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದು, ರಾಜಕೀಯ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಮ್ಮ ನಿವಾಸದಲ್ಲಿಂದು ಯೋಗ ಪ್ರದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬಾರದು ಎಂದು ಕಾಂಗ್ರೆಸ್ನವರು ತಮ್ಮ ಬಳಿ ಓಡೋಡಿ ಬಂದರು. ಸರಿಯಾಗಿ ಚರ್ಚೆ  ಮಾಡದೆ ಸರ್ಕಾರ ರಚನೆಗೆ ಮುಂದಾದರು. ಎಚ್ ಡಿ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಕೇಳಿಕೊಂಡರು. ಈಗ ಒನ್ ಥಡರ್್ ನಿಯಮವೂ ಇಲ್ಲ, ಯಾವ ನಿಯಮಗಳೂ ಪಾಲನೆಯಾಗುತ್ತಿಲ್ಲ ಎಂದು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

     ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಕಳೆಗುಂದಿದೆ. ಲೋಕಸಭಾ ಚುನಾವಣೆ ಸೋಲಿಗೆ ನಾವು ಕಾರಣಕರ್ತರೇ ? ಹಾಗೇನಾದರೂ ಇದ್ದರೆ ಬಹಿರಂಗವಾಗಿಯೇ ಹೇಳಬಹುದು.  ಮಲ್ಲಿಕಾರ್ಜುನ  ಖರ್ಗೆ  ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ತಾನು ಹೇಳಿದ್ದೆ. ಕಾಂಗ್ರೆಸ್ಗೆ ಸರ್ಕಾರ ನಡೆಸುವ ಮನಸ್ಸಿದೆಯೇ ?  ಇಲ್ಲವೇ ? ಈ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಎಚ್.ಡಿ. ದೇವೇಗೌಡರು ಮಾರ್ಮಿಕವಾಗಿ ಹೇಳಿದರು. ರಾಜಕಾರಣದಲ್ಲಿ ಅನೇಕ ಏಳು ಬೀಳುಗಳಿರುತ್ತದೆ. ಮೈತ್ರಿ ಸಕರ್ಾರ ಮಾಡಲೇಬೇಕು ಎಂಬ ಆಸೆ ತಮಗೇನೂ ಇರಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡಬೇಕು ಎಂದರು. ಕಾಂಗ್ರೆಸ್ನವರು ನಮ್ಮ ಮಂತ್ರಿ ಸ್ಥಾನವನ್ನೂ ಕಿತ್ತುಕೊಂಡಿದ್ದಾರೆ.

   ನಾವು  ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇವೆ, ತಾನೇನಾದರೂ ಮಾತನಾಡಿದ್ದೇನಾ ? ಹಾಲಿ  ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ  ಎಂದು ಕೇಳಿದ್ದೆ, ಆದರೆ, ಕಾಂಗ್ರೆಸ್ನವರು ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ  ಬಿಟ್ಟುಕೊಟ್ಟರು. ಜೊತೆಯಲ್ಲೇ ಇದ್ದು, ಬೆಳೆದವರು ನನ್ನನ್ನು ಬಿಟ್ಟುಹೋದರು. ಹಾಗಿದ್ದರೂ  ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ ಎಂದು ಕಾಂಗ್ರೆಸ್ ವಿರುದ್ಧ  ದೇವೇಗೌಡ ಅಸಮಾಧಾನ  ಹೊರ ಹಾಕಿದರು ಇದಕ್ಕೂ ಮೊದಲು ಯೋಗದ ಬಗ್ಗೆ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಆರೋಗ್ಯ ಕಾಪಾಡಲು ಯೋಗ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಾಗಿದ್ದಾಗ ಅಂದಿನ ಉಪಾಧ್ಯಾಯರು ಸೂರ್ಯ ನಮಸ್ಕಾರ ಮಾಡಿಸುತ್ತಿದ್ದರು. ಸೂರ್ಯ ನಮಸ್ಕಾರ ಮಾಡುವುದು ಬಹಳ ಒಳ್ಳೆಯದು. ಬಾಲ್ಯದಿಂದಲೂ ನಾನು ಯೋಗ ಅಭ್ಯಾಸ ಮಾಡುತ್ತಿದ್ದೆ. ಇತ್ತೀಚೆಗೆ ನರೇಂದ್ರ ಮೋದಿ ಪ್ರಧಾನಿಯಾದಾಗ ಯೋಗಕ್ಕೆ ಹೆಚ್ಚು ಮಹತ್ವ ಬಂದಿದೆ. ರಾಂಚಿಯಲ್ಲಿಯೂ ಸಹ ಅವರು ಭಾಗಿಯಾಗಿ ಯೋಗ ಮಾಡಿದ್ದಾರೆ ,

    ಯುವ ಪೀಳಿಗೆಗೆ ಇದರ ಅವಶ್ಯಕತೆ ಇದೆ, ಏಕಾಗ್ರತೆ, ಆರೋಗ್ಯಕ್ಕೆ ಯೋಗ ಅಗತ್ಯ ಇದೆ, ಪ್ರಧಾನಿ ಯೋಗಕ್ಕೆ ಕೊಟ್ಟ ಮಹತ್ವವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ದೇವೇಗೌಡ ಅವರ ರಾಜಕೀಯ ಹೇಳಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ, ದೇವೇಗೌಡ ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಕೆಲವು ನಾಯಕರ ಭಿನ್ನಾಭಿಪ್ರಾಯಗಳ ಬಗ್ಗೆ ದೇವೇಗೌಡರು ಹೇಳಿದ್ದಾರೆ. ಅದನ್ನೇ ತಪ್ಪಾಗಿ ತಿಳಿಯಲಾಗಿದೆ. ಸಕರ್ಾರ ಸುಭದ್ರವಾಗಿರಲಿದೆ ಎಂದು ಹೇಳಿದರು. ಯಾವ ರೀತಿ ಮೈತ್ರಿ ಸಕರ್ಾರ ರಚನೆಯಾಯಿತು ಎಂಬುದನ್ನು ದೇವೇಗೌಡರು ವಿವರಿಸಿದ್ದಾರೆ. ಅವರು ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹೇಳಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ  ಮುಂದಿನ 4 ವರ್ಷ ಸುಭದ್ರವಾಗಿರಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಉದ್ಭವಿಸಲು ಬಿಡುವುದಿಲ್ಲ. ಅದು ರಾಜ್ಯದ ಜನರಿಗೂ ಇಷ್ಟವಿಲ್ಲ. ಅಧಿಕಾರ ನಡೆಸುವ ಯೋಗ್ಯತೆ ಇದ್ದರೆ ಅಧಿಕಾರ ನಡೆಸಲಿ, ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಲಿ, ನಾವು 105 ಮಂದಿ ಶಾಸಕರಿದ್ದೇವೆ. ನಾವು ಅಧಿಕಾರ ನಡೆಸುತ್ತೇವೆ ಎಂದು ಖಾರವಾಗಿ ಹೇಳಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ದ್ರೋಹಿಗಳ ಸಕರ್ಾರ ನಡೆಯುತ್ತಿದೆ. ಸರ್ಕಾರ ರಚನೆಯಾದಾಗಿನಿಂದಲೂ ಸರ್ಕಾರ ಗೊಂದಲದಲ್ಲಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೊದಲ ದಿನದಿಂದಲೂ ಕಣ್ಣೀರು ಹಾಕುತ್ತಿದ್ದಾರೆ. ಮೊದಲು ಕಾಂಗ್ರೆಸ್ನವರು ಬೇಷರತ್ ಬೆಂಬಲ ಎಂದು ಹೇಳಿದರು. ಈಗ ಒತ್ತಡ  ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಅವರು ಪ್ರತಿದಿನ "ಹೌದು ನಾನೇ ಮುಖ್ಯಮಂತ್ರಿ" ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಹೌದು ನೀವೇ ಸರ್ಕಾರ ರಚಿಸಿ ಎಂದು ಹೇಳಿದ್ದು ನಿಜ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೂ ನಿಜ. ಬಿಜೆಪಿ ಅಧಿಕಾರ ಸರಿ ಇರುವುದಿಲ್ಲ, ಆದ್ದರಿಂದ ಎರಡೂ ಪಕ್ಷಗಳು ಒಟ್ಟಾಗಿ ಹೋಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಇವೆಲ್ಲವೂ ರಾಹುಲ್ ಗಾಂಧಿ ಸಮ್ಮುಖದಲ್ಲೇ ತೀರ್ಮಾನವಾಗಿತ್ತು ಎಂದು ಹೇಳಿದ್ದಾರೆ.

   ಮಾತುಕತೆಯಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಇದರಲ್ಲಿ ಎರಡು ಮಾತಿಲ್ಲ, ಮೈತ್ರಿ ಸಕರ್ಾರ ಅಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ದೇವೇಗೌಡ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ, ಅವರು ಹಿರಿಯರು, ಅವರ ಅನುಭವ ಅಪಾರ. ಅವರು ಯಾವುದೇ ಮಾತನ್ನು ಹೇಳುವಾಗಲೂ ಸರಿಯಾಗಿ ಯೋಚಿಸಿಯೇ ಮಾತನಾಡುತ್ತಾರೆ, ಹಾಗಾಗಿ ಅವರ ಮಾತನ್ನು ಪರಿಗಣಿಸಬೇಕು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ. ದೇವೇಗೌಡ ಅವರ ಹೇಳಿಕೆ ಬಗ್ಗೆ ತಾವು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂತು ಚರ್ಚೆ  ಮಾಡುತ್ತೇವೆ ಎಂದು ಹೇಳಿದರು.  ನಾವು ಸಚಿವ ಸ್ಥಾನವನ್ನು ಕಿತ್ತುಕೊಂಡಿಲ್ಲ. ಓರ್ವ ಪಕ್ಷೇತರ ಶಾಸಕನಿಗೆ ಕಾಂಗ್ರೆಸ್ ಕೋಟಾದಡಿ, ಮತ್ತೊಬ್ಬ ಪಕ್ಷೇತರ ಶಾಸಕನಿಗೆ ಜೆಡಿಎಸ್ ಕೋಟಾದಡಿ ಸಚಿವ ಸ್ಥಾನ ನೀಡುವುದಾಗಿ ಮಾತುಕತೆ ನಡೆದಿತ್ತು. ಒತ್ತಾಯಪೂರ್ವಕವಾಗಿ ಸಚಿವ ಸ್ಥಾನ ಕಿತ್ತುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಸಕರ್ಾರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರು ಸಹಜ ರೀತಿಯಲ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ. ರಾಜ್ಯ ಸರ್ಕಾರ  ಸುಭದ್ರವಾಗಿರಲಿದ್ದು, ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ಬಿ ಎಸ್ ಯಡಿಯೂರಪ್ಪ ಅವರು ಇತ್ತೀಚಿನ ದಿನದವರೆಗೂ ಸರ್ಕಾರ  ಬೀಳಿಸುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಈಗ ಸರ್ಕಾರದ ಪತನಕ್ಕೆ ಕೈ ಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ಮೈತ್ರಿ ಮತ್ತು ಸರ್ಕಾರದ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ತಮಗೆ ಆದೇಶವಿದೆ. ಆದ್ದರಿಂದ ಹೆಚ್ಚು ಮಾತನಾಡುವುದಿಲ್ಲ. ಸರ್ಕಾರ ಸುಭದ್ರವಾಗಿರಲಿದೆ. ಮಾಧ್ಯಮದವರು, ಬಿಜೆಪಿಯವರು, ನಾವು ಯಾರು ಕೂಡ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಎಲ್ಲಾ ವಿಷಯಗಳನ್ನು ಸಿಎಲ್ಪಿ ನಾಯಕರು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಚರ್ಚೆ  ಮಾಡುತ್ತಾರೆ. ನಾವು ಜನರ ಸೇವೆಗೆ ಬಂದವರು, ಅದನ್ನು ಮಾಡುತ್ತೇವೆ ಎಂದು ಹೇಳಿದರು.