ನವದೆಹಲಿ, ಏ.29, ಆರೋಗ್ಯಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ನಿರ್ದೇಶನ ನೀಡಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಎಲ್ಲಾ ಉದ್ಯೋಗಿಗಳು ಕಚೇರಿಗೆ ಹಾಜರಾಗುವ ಮೊದಲು ಈ ಆ್ಯಪ್‌ನಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದೆ.ಹಿರಿಯ ಅಧಿಕಾರಿಯೊಬ್ಬರು ಕೊರೋನವೈರಸ್ ಸೋಂಕಿಗೆ ಒಳಗಾಗಿ ಮತ್ತು ಅನೇಕ ಅಧಿಕಾರಿಗಳನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಿ ನೀತಿ ಆಯೋಗದ ಕಟ್ಟಡವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ ಒಂದು ದಿನದ ನಂತರ ಸರ್ಕಾರದ ಈ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಬುಧವಾರ ಕಚೇರಿ ಜ್ಞಾಪಕ ಪತ್ರವನ್ನು ಕಳುಹಿಸಲಾಗಿದೆ.ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ, “ಮಧ್ಯಮ ಅಥವಾ ಹೆಚ್ಚಿನ ಅಪಾಯವನ್ನು ಸೂಚಿಸುವ ಸಂದೇಶವನ್ನು ಆಪ್ ತೋರಿಸಿದಲ್ಲಿ, ಅವನು ಅಥವಾ ಅವಳು ಕಚೇರಿಗೆ ಬರದೆ, ಮನೆಯಲ್ಲಿಯೇ ಸ್ವಯಂ ಪ್ರತ್ಯೇಕವಾಗಿ 14 ದಿನಗಳವರೆಗೆ ಇರಬೇಕು ಅಥವಾ ಸುರಕ್ಷಿತ ಅಥವಾ ಕಡಿಮೆ ಅಪಾಯವನ್ನು ತೋರಿಸುವವರೆಗೆ ಆ ಪ್ರದೇಶಕ್ಕೆ ಬರಬಾರದು ಎಂದು ತಿಳಿಸಲಾಗಿದೆ.ಈ ನಿರ್ದೇಶನದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಂತೆ ಪ್ರತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಆಡಳಿತಕ್ಕೆ ಸೂಚನೆ ನೀಡಲಲಾಗಿದೆ ಎಂದು ಡಿಒಪಿಟಿ ತಿಳಿಸಿದೆ.ಅಗತ್ಯವಿರುವ ಎಲ್ಲಾ ಸ್ವಾಯತ್ತ, ಶಾಸನಬದ್ಧ ಸಂಸ್ಥೆಗಳು ಅಥವಾ ಸಾರ್ವಜನಿಕ ವಲಯದ ಘಟಕಗಳಿಗೆ ಇದೇ ರೀತಿಯ ಸೂಚನೆಗಳನ್ನು ನೀಡುವಂತೆ ಸಚಿವಾಲಯಗಳು / ಇಲಾಖೆಗಳಿಗೆ ಮೆಮೋದಲ್ಲಿ ಸೂಚಿಸಲಾಗಿದೆ.