ಉತ್ತಮ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚಿಸುವ ಬದಲು, ವಿರೋಧಿಗಳನ್ನು ಸದೆಬಡೆಯಲು ಪ್ರಯತ್ನಿಸುತ್ತಿದ್ದಾರೆ: HDK

Instead of discussing the development of a better Karnataka, trying to silence opponents: HDK

ಹಾಸನ 23: ಈಗಿನ ಸರ್ಕಾರ ಕರ್ನಾಟಕದಲ್ಲಿ ಕೆಟ್ಟ ರಾಜಕೀಯಕ್ಕೆ ನಾಂದಿ ಹಾಡುತ್ತಿದೆ. ನಮ್ಮ ಪೂರ್ವಿಕರು ಮಾಡಿರುವ ಪರಂಪರೆಯನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪೊಲೀಸರ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಈ ಸರ್ಕಾರದ ಸಚಿವರು ನಿರ್ದೇಶನ ನೀಡುವ ಮೂಲಕ ಪೊಲೀಸರಿಂದ ಬೇಕಾಬಿಟ್ಟಿ ಪ್ರಕರಣ ದಾಖಲಿಸಲಾಗುತ್ತಿದೆ. ಈ ರೀತಿಯ ದುರುಪಯೋಗ, ಉಲ್ಲಂಘನೆಗಳು ಸರ್ಕಾರದಿಂದ ಆಗುತ್ತಿವೆ ಎಂದರು.

ರಾತ್ರಿಯಿಡೀ ಒಬ್ಬ ಜನಪ್ರತಿನಿಧಿಯನ್ನು ಸುತ್ತಾಡಿಸುವ ಅಗತ್ಯ ಏನಿತ್ತು? ಕಾನೂನುನಡಿ ಸೂಕ್ತ ಹೋರಾಟ ನಡೆಸಿದಲ್ಲಿ, ತಪ್ಪು ಮಾಡಿರುವ ಅಧಿಕಾರಿಗಳು ಅಮಾನತು ಆಗುತ್ತಾರೆ ಎಂದರು.

ರಾಜ್ಯಸಭೆಯಲ್ಲಿ ಕೇಂದ್ರದ ಗೃಹ ಸಚಿವರು ಕೆಲವು ವಿಷಯ ಪ್ರಸ್ತಾಪಿಸಿದ್ದು, ಅದು ರಾಜ್ಯಸಭೆಗೆ ಸಂಬಂಧಿಸಿದ ವಿಷಯ. ಅದನ್ನು ವಿಧಾನ ಮಂಡಲದಲ್ಲಿ ಚರ್ಚಿಸುವ ಅಗತ್ಯ ಏನಿತ್ತು? ಉತ್ತಮ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ, ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ವಿರೋಧಿಗಳನ್ನು ಸದೆಬಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಉತ್ತರ ಕರ್ನಾಟಕದಲ್ಲಿ ಬಾಣಂತಿಯರ ಸಾವುಗಳು ಸಂಭವಿಸುತ್ತಿವೆ, ಅದನ್ನು ಸರಿಪಡಿಸಲಾಗದವರು, ಇದೀಗ ಕಲಬುರ್ಗಿ, ಮೈಸೂರಿನಲ್ಲಿ ನಿಮ್ಹಾನ್ಸ್‌ ಶಾಖೆ ತೆರೆಯುವುದಾಗಿ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹಾಸನದ ಜಿಲ್ಲೆಯ ಅಭಿವೃದ್ಧಿ ಆಗಿದ್ದರೆ ಅದು ಎಚ್.ಡಿ. ದೇವೇಗೌಡರು, ಎಚ್‌.ಡಿ. ರೇವಣ್ಣ ಅವರ ಪರಿಶ್ರಮದಿಂದ. ನಾನು ಮುಖ್ಯಮಂತ್ರಿ ಆಗಿದ್ದಾಗ, ಅನೇಕ ಕೊಡುಗೆಗಳನ್ನು ಜಿಲ್ಲೆಗೆ ನೀಡಲಾಗಿದೆ. ಜನರನ್ನು ಲೂಟಿ ಮಾಡಿದವರು ಸಾಕ್ಷಿ ಗುಡ್ಡೆಗಳನ್ನು ತೋರಿಸಬಹುದು. ಆದರೆ, ನಾವು ಅಭಿವೃದ್ಧಿಯ ಸಾಕ್ಷಿಗುಡ್ಡೆ ತೋರಿಸಲಷ್ಟೇ ಸಾಧ್ಯ ಎಂದು ತಿರುಗೇಟು ನೀಡಿದರು.