ಇನ್ಸ್‌ಪೈರ್ ಬಿಫೋರ್ ದ ಎಕ್ಸ್‌ಪೈರ್ : ಕಂಪ್ಯೂಟರ್ ಮ್ಯಾನ್ ಬಸವರಾಜ

ಇನ್ಸ್‌ಪೈರ್ ಬಿಫೋರ್ ದ ಎಕ್ಸ್‌ಪೈರ್ : ಕಂಪ್ಯೂಟರ್ ಮ್ಯಾನ್ ಬಸವರಾಜ Inspire Before the Expire: Computer Man Basavaraj

ಲೋಕದರ್ಶನ ವರದಿ 

ಮಹಾಲಿಂಗಪುರ 12 :  ಇನ್ಸ್‌ ಪೈರ್ ಬಿಫೋರ್ ದ ಎಕ್ಸ್‌ ಪೈರ್ ( ಸಾವು ಬರುವುದಕ್ಕೆ ಮೊದಲೇ ಸ್ಫೂರ್ತಿಗೊಳ್ಳಿ)ಎಂಬಂತೆ ಜೀವನದ ಪ್ರತಿ ಕ್ಷಣವನ್ನೂ ಇನ್ಸ್‌ ಪೈರ್ ಆಗಿ ಬದುಕಿನಲ್ಲಿ ಏನನ್ನಾದರೂ ಸಾಧಿಸಿ ಎಂದು ಕಂಪ್ಯೂಟರ್ ಮ್ಯಾನ್ ಖ್ಯಾತಿಯ ಪ್ರತಿಭೆ ಬಸವರಾಜ ಉಮರಾಣಿ ಹೇಳಿದರು. ಸ್ಥಳೀಯ ಜೆಸಿ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ, ಶ್ರಮ ಮೇವ ಜಯತೆ ಎಂಬಂತೆ ನಿರಂತರ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ಹೇಳಿದ ಅವರು, ಎರಡೂ ಕಣ್ಣುಗಳು ಕಾಣಿಸದಿದ್ದರೂ ಸಹ ಭಾಗಕಾರ, ಗುಣಾಕಾರ, ಸಂಕಲನ, ವ್ಯವಕಲನದ ಉದ್ದುದ್ದ ಲೆಕ್ಕಗಳನ್ನು ಅಂದರೆ ಸುಮಾರು 30 ಸಂಖ್ಯೆಗಳ ಲೆಕ್ಕಗಳನ್ನೂ ಸಹ ಯಾವುದೇ ಪರಿಕರಗಳಿಲ್ಲದೇ ಕ್ಷಣಾರ್ಧದಲ್ಲಿ ಮನಸ್ಸಿನಲ್ಲಿಯೇ ಗುಣಿಸಿ, ಭಾಗಿಸಿ, ಕೂಡಿಸಿ, ಕಳೆದು ಉತ್ತರ ಹೇಳುತ್ತಾ, ಜನ್ಮ ದಿನಾಂಕ ಹೇಳಿದೊಡನೆ ವಾರದ ದಿನ ತಿಳಿಸುತ್ತಾ ಬೆರಗು ಮೂಡಿಸಿದರು. 

ಇವರನ್ನು ಸನ್ಮಾನಿಸಿ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಎರಡೂ ಕಣ್ಣಿಲ್ಲದ ಬಸವರಾಜ ಉಮರಾಣಿ ಎಂಟನೇ ವಯಸ್ಸಿನಿಂದಲೇ ಪರಿಶ್ರಮದಿಂದ ಇಂತಹ ಅದ್ಭುತ ಚಮತ್ಕಾರ ಮೈಗೂಡಿಸಿಕೊಂಡಿದ್ದು ಭಾರತದ ಪ್ರಧಾನಿಗಳಿಂದ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಂದ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. 60ಕ್ಕೂ ಹೆಚ್ಚು ದೇಶಗಳಿಗೆ ಹೋಗಿ ಕಾರ್ಯಕ್ರಮ ನೀಡಿ ನಮ್ಮ ನಾಡಿನ ಕೀರ್ತಿ ಪತಾಕೆ ಹಾರಿಸಿ ಬಂದಿದ್ದಾರೆ ಆದರೆ ಈಗ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ವಾಸಿಸುತ್ತಿರುವ ಇವರು ಅತ್ಯಂತ ಕಡುಬಡತನದಲ್ಲಿ ಬಳಲುತ್ತಿದ್ದಾರೆ ಈತನ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಈತನ ಸಹೋದರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು,

ನಾಲ್ಕು ಸದಸ್ಯರ ಇಡೀ ಕುಟುಂಬವನ್ನು ಕಣ್ಣಿಲ್ಲದ ಬಸವರಾಜನೇ ಊರೂರು ಸುತ್ತಿ ಕಾರ್ಯಕ್ರಮಗಳನ್ನು ನಡೆಸಿ ಸಾಗಿಸಬೇಕಾಗಿದೆ ಆದರೆ ಯಾವುದೇ ಸರ್ಕಾರಗಳು, ಸಂಘ ಸಂಸ್ಥೆಗಳು ಕೇವಲ ಮಾನ, ಸನ್ಮಾನಕ್ಕಷ್ಟೇ ಸೀಮಿತಗೊಳಿಸಿದ್ದು ಈತನ ಬದುಕಿಗೆ ಆಧಾರವಾಗುವಂತಹ ಯಾವುದೇ ನೆರವನ್ನು ಇದುವರೆಗೂ ನೀಡದಿರುವುದು ಅತ್ಯಂತ ಶೋಚನೀಯ ಮತ್ತು ಇಂತಹ ಮಹಾನ್ ಪ್ರತಿಭೆಗೆ ಮಾಡಿದ ಅವಮಾನ. ಈಗಲಾದರೂ ಸಂಬಂಧ ಪಟ್ಟ ಇಲಾಖೆ, ಸರ್ಕಾರ ಈತನ ಕಡೆ ಗಮನ ಹರಿಸಿ ಈತನ ಸಂಕಷ್ಟಗಳಿಗೆ ಸ್ಪಂದಿಸಿ ಸರಾಗ ಜೀವನಕ್ಕೆ ಸಹಕಾರ ನೀಡಿದಲ್ಲಿ ಇಡಿ ಕುಟುಂಬಕ್ಕೆ ಆಸರೆಯಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.