ಗಾಯದ ಸಮಸ್ಯೆ ಆರ್ಚರ್ ಶ್ರೀಲಂಕಾ ಪ್ರವಾಸ ಹಾಗೂ ಐಪಿಎಲ್ ನಿಂದ ಔಟ್

ನವದೆಹಲಿ, ಫೆ.6 :   ಮೊಣಕೈಗೆ ಗಾಯವಾದ ಕಾರಣ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಶ್ರೀಲಂಕಾ ಪ್ರವಾಸದಿಂದ ಹೊರನಡೆದಿದ್ದಾರೆ.  

ಸೆಂಚುರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ಚರ್ ಗಾಯಗೊಂಡಿದ್ದರು. ನಂತರ ಉಳಿದ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ. ಆರ್ಚರ್ ಸ್ಕ್ಯಾನ್ ಗೆ ಒಳಪಟ್ಟಾಗ, ಅವರ ಮೊಣಕೈಯಲ್ಲಿ ಮುರಿತವಾಗಿದ್ದು ದೃಢಪಟ್ಟಿದೆ.  

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ ಹೇಳಿಕೆ ನೀಡಿದ್ದು, "ಆರ್ಚರ್ ಗಾಯದ ಚಿಕಿತ್ಸೆಗೆ ಇಸಿಬಿಯ ವೈದ್ಯಕೀಯ ತಂಡ ಸೇರಿಕೊಂಡಿದ್ದಾರೆ. ಜೂನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟೆಸ್ಟ್ ಸರಣಿಗೆ ತಯಾರಿ ನಡೆಸಲಿದ್ದಾರೆ" ಎಂದು ತಿಳಿಸಿದೆ. 

ಈ ವರ್ಷದ ಮಾರ್ಚ್‌ನಲ್ಲಿ ಇಂಗ್ಲೆಂಡ್ ಶ್ರೀಲಂಕಾ ಪ್ರವಾಸ ಬೇಳೆಸಲಿದ್ದು, ಆತಿಥೇಯರೊಂದಿಗೆ ಎರಡು ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಆರ್ಚರ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ ಮತ್ತು ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ಐಪಿಎಲ್ ಪ್ರಾರಂಭವಾಗುವ ಮೊದಲು ರಾಜಸ್ಥಾನ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.